ADVERTISEMENT

ಕಾರಂತ ಬಡಾವಣೆ: ದಾಖಲೆ ಪರಿಶೀಲನೆ ಆರಂಭ

ಕಟ್ಟಿರುವ ಮನೆಗಳ ಬಗ್ಗೆ ದಾಖಲೆ ಸಲ್ಲಿಸಲು ವೆಬ್‌ ಪೋರ್ಟಲ್

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 21:06 IST
Last Updated 26 ಫೆಬ್ರುವರಿ 2021, 21:06 IST
ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್
ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್   

ಬೆಂಗಳೂರು: ಶಿವರಾಮ ಕಾರಂತ ಬಡಾವಣೆಯಲ್ಲಿ 2008ರಿಂದ 2018ರ ಅವಧಿಯಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ಪರಿಶೀಲನೆ ಕಾರ್ಯವನ್ನು ಸುಪ್ರೀಂ ಕೋರ್ಟ್ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ನೇತೃತ್ವದ ಸಮಿತಿ ಆರಂಭಿಸಿದೆ.

ಈ ಅವಧಿಯಲ್ಲಿ ಮನೆ ಮತ್ತು ಕಟ್ಟಡಗಳು ನಿರ್ಮಾಣ ಮಾಡಿಕೊಂಡಿದ್ದರೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ವೆಬ್‌ ಪೋರ್ಟಲ್(jcc-skl.in) ಅಭಿವೃದ್ಧಿಪಡಿಸಲಾಗಿದೆ. ಮಾ.1ರಿಂದ ದಾಖಲೆಗಳನ್ನು ಸಾರ್ವಜನಿಕರು ಸಲ್ಲಿಸಬಹುದು ಎಂದು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾರ್ವಜನಿಕರಿಗೆ ಅನುಕೂಲ ಆಗುವಂತೆಬಡಾವಣೆಗೆ ಗುರುತಿಸಿರುವ ವ್ಯಾಪ್ತಿಯಲ್ಲೇ ಐದು ಕಡೆ ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ವಡೇರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮೋಡಿ ಅಗ್ರಹಾರದ ಸರ್ಕಾರಿ ಉರ್ದು ಶಾಲೆಯಲ್ಲಿ ಮಾ.1ರಿಂದ ಸಹಾಯ ಕೇಂದ್ರ ಆರಂಭವಾಗಲಿದೆ. ಉಳಿದ ನಾಲ್ಕು ಕಡೆಗಳಲ್ಲಿ ನಂತರ ದಿನಗಳಲ್ಲಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ADVERTISEMENT

ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಗೆ 17 ಹಳ್ಳಿಗಳ 3,546 ಎಕರೆ ಭೂಮಿ ಸ್ವಾಧೀನಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) 2008ರ ಡಿಸೆಂಬರ್‌ 30ರಂದು ಮೊದಲ ಅಧಿಸೂಚನೆ ಪ್ರಕಟಿಸಿತ್ತು. ಈ ಅಧಿಸೂಚನೆಯನ್ನು 2014ರ ನ.26ರಂದು ಹೈಕೋರ್ಟ್‌ ರದ್ದುಪಡಿಸಿತ್ತು. ಸುಪ್ರೀಂ ಕೋರ್ಟ್‌ಗೆ ಬಿಡಿಎ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್‌ ಆದೇಶವನ್ನು 2018ರ ಆಗಸ್ಟ್ 3ರಂದು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.

ಪ್ರಾರಂಭಿಕ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ದಿನಾಂಕದ ನಡುವಿನ 10 ವರ್ಷಗಳ ಅವಧಿಯಲ್ಲಿ ಎಷ್ಟು ಮನೆಗಳು ನಿರ್ಮಾಣ ಆಗಿವೆ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜೈಕರ್‌ ಜರೋಮ್, ನಿವೃತ್ತ ಡಿಜಿಪಿ ಎಸ್‌.ಟಿ. ರಮೇಶ್ ಅವರನ್ನು ಒಳಗೊಂಡ ಸಮಿತಿಯನ್ನು ಸುಪ್ರೀಂ ಕೋರ್ಟ್ 2020ರ ಡಿ.3ರಂದು ರಚನೆ ಮಾಡಿದೆ.

‘ಆರು ತಿಂಗಳ ಅವಧಿಯಲ್ಲಿ ವರದಿ ನೀಡಲು ಸುಪ್ರೀಂ ಕೋರ್ಟ್ ತಿಳಿಸಿದೆ. ಸಾಧ್ಯವಾಗದಿದ್ದರೆ ಮತ್ತಷ್ಟು ಕಾಲಾವಕಾಶ ಕೇಳಲಾಗುವುದು’ ಎಂದು ಚಂದ್ರಶೇಖರ್‌ ತಿಳಿಸಿದರು.

7 ಸಾವಿರ ಹೊಸ ಕಟ್ಟಡ

‘ಬಿಡಿಎ ನಡೆಸಿರುವ ಏರಿಯಲ್ ಸರ್ವೆ ಪ್ರಕಾರ 2008ಕ್ಕೂ ಮುನ್ನ 2,500 ಮನೆಗಳಿದ್ದವು. ಈಗ 7 ಸಾವಿರಕ್ಕೂ ಹೆಚ್ಚು ಕಟ್ಟಡಗಳಿವೆ’ ಎಂದು ಎ.ವಿ. ಚಂದ್ರಶೇಖರ್ ಹೇಳಿದರು.

ಅಂದಾಜು ಎಷ್ಟು ಮನೆಗಳಿವೆ ಎಂದಷ್ಟೇ ಉಪಗ್ರಹ ಆಧಾರಿತ ಸರ್ವೆಯಲ್ಲಿ ತಿಳಿಯಲಿದೆ. ಖಚಿತ ಅಂಕಿ–ಅಂಶ ಮತ್ತು ಸ್ಥಿತಿಗತಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ದಾಖಲೆಗಳನ್ನು ಪಡೆದುಕೊಳ್ಳಲು ಸಮಿತಿ ಮುಂದಾಗಿದೆ ಎಂದರು.

‘ಎಲ್ಲರೂ ಖುದ್ದು ಕಚೇರಿಗೆ ಬಂದು ದಾಖಲೆ ಸಲ್ಲಿಸಲು ಆಗುವುದಿಲ್ಲ. ಆದ ಕಾರಣಕ್ಕೇ ವೆಬ್‌ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಮನೆಯಲ್ಲೇ ಕುಳಿತು ದಾಖಲೆ ಸಲ್ಲಿಸಬಹುದು. ತಿಳಿಯದಿದ್ದರೆ ಸಹಾಯ ಕೇಂದ್ರಕ್ಕೆ ಬರಬಹುದು. ಈ ಕೇಂದ್ರಗಳಲ್ಲಿ ಕಂಪ್ಯೂಟರ್‌, ಸ್ಕ್ಯಾನರ್, ಪ್ರಿಂಟರ್ ಸೇರಿದಂತೆ ನುರಿತ ಸಿಬ್ಬಂದಿ ಇರಲಿದ್ದಾರೆ. ಸಿ.ಎಂ.ಆರ್. ಕಾನೂನು ಕಾಲೇಜಿನ 42 ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ಕೆ ನೆರವಾಗಲು ಮುಂದೆ ಬಂದಿದ್ದಾರೆ. ಇವರು ದಾಖಲೆಗಳನ್ನು ಪೋರ್ಟಲ್‌ಗೆ ಅಪ್‌ಲೋಡ್ ಮಾಡಲು ಜನರಿಗೆ ನೆರವಾಗಲಿದ್ದಾರೆ’ ಎಂದು ವಿವರಿಸಿದರು.

17 ವಿಧದ ದಾಖಲೆ ಕೇಳಿದ ಸಮಿತಿ

ಹಕ್ಕು ಹೊಂದಿರುವ ಬಗ್ಗೆ ದಾಖಲೆ, ಕಟ್ಟಡದ ಚಿತ್ರ, ತೆರಿಗೆ ಪಾವತಿಸಿರುವ ರಸೀದಿ, ಖಾತಾ ಪ್ರತಿ, ವಿಳಾಸ ಪುರಾವೆ(ಆಧಾರ್‌), ಋಣಭಾರ ರಹಿತ ಪ್ರಮಾಣ ಪತ್ರ, ಮಂಜೂರಾದ ನಕ್ಷೆ, ಕಟ್ಟಡ ಪ್ರಾರಂಭಕ್ಕೆ ಪಡೆದ ಪ್ರಮಾಣ ಪತ್ರ, ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ, ವಿದ್ಯುತ್ ಸಂಪರ್ಕ ಮಂಜೂರಾತಿ ಪ್ರಮಾಣ ಪತ್ರ ಸೇರಿ 17 ವಿವಿಧ ದಾಖಲೆಗಳನ್ನು ಸಮಿತಿ ಕೇಳಿದೆ.

‘ಸಾರ್ವಜನಿಕರಲ್ಲಿ ಎಷ್ಟು ಲಭ್ಯವಿದೆಯೋ ಅಷ್ಟನ್ನು ಸಲ್ಲಿಸಬೇಕು. ಅವುಗಳನ್ನು ಕ್ರೋಡೀಕರಿಸಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸುತ್ತೇವೆ. ಮುಂದಿನ ನಿರ್ಧಾರ ನ್ಯಾಯಾಲಯಕ್ಕೆ ಬಿಟ್ಟದ್ದು’ ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದರು.

2018ರ ನಂತರ ಕಟ್ಟಿದ್ದರೆ ಅಕ್ರಮ

‘2018ರ ನಂತರವೂ ಮನೆ ಕಟ್ಟಿದ್ದರೆ ಅದು ಅಕ್ರಮವಾಗಲಿದೆ. ಅದನ್ನು ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ’ ಎಂದು ಎ.ವಿ. ಚಂದ್ರಶೇಖರ್ ಹೇಳಿದರು.

‘ಈ ಅಕ್ರಮ ಕಟ್ಟಡಗಳಿಗೂ ನಮ್ಮ ಸಮಿತಿಗೂ ಸಂಬಂಧ ಇಲ್ಲ. 10 ವರ್ಷಗಳ ಅವಧಿಯಲ್ಲಿ ನಿರ್ಮಾಣ ಆಗಿರುವ ಕಟ್ಟಡಗಳ ಬಗ್ಗೆಯಷ್ಟೇ ನಾವು ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತೇವೆ. 2018ರ ನಂತರ ಕಟ್ಟಡಗಳು ನಿರ್ಮಾಣ ಆಗಿದ್ದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವುದು, ಬಿಡುವುದು ಬಿಡಿಎಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ನಾವು ಮಧ್ಯ ಪ್ರವೇಶ ಮಾಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಎಲ್ಲೆಲ್ಲಿ ಸಹಾಯ ಕೇಂದ್ರ

ಸಮುದಾಯಭವನ, ಸೋಮಶೆಟ್ಟಿಹಳ್ಳಿ

ಸರ್ಕಾರಿ ಶಾಲೆ, ಬ್ಯಾಲಕೆರೆ

ಅಂಬೇಡ್ಕರ್ ಭವನ, ಸಿಂಗನಾಯಕನಹಳ್ಳಿ

ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ಮೋಡಿ ಅಗ್ರಹಾರ

ಬಿಡಿಎ ಕೇಂದ್ರ ಕಚೇರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.