ADVERTISEMENT

216 ಶ್ರಮಿಕ ರೈಲುಗಳ ಸಂಚಾರ: ಡಿಸಿಎಂ ಅಶ್ವತ್ಥನಾರಾಯಣ ಮಾಹಿತಿ

ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ

​ಪ್ರಜಾವಾಣಿ ವಾರ್ತೆ
Published 24 ಮೇ 2020, 18:34 IST
Last Updated 24 ಮೇ 2020, 18:34 IST
ಸಿ.ಎನ್. ಅಶ್ವತ್ಥನಾರಾಯಣ ಅವರು ವಲಸೆ ಕಾರ್ಮಿಕರ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆಗಳನ್ನು ವಿತರಿಸಿದರು
ಸಿ.ಎನ್. ಅಶ್ವತ್ಥನಾರಾಯಣ ಅವರು ವಲಸೆ ಕಾರ್ಮಿಕರ ಮಕ್ಕಳಿಗೆ ಚನ್ನಪಟ್ಟಣದ ಗೊಂಬೆಗಳನ್ನು ವಿತರಿಸಿದರು   

ಬೆಂಗಳೂರು:‘ಇದೇ 31ರವರೆಗೆ ಪ್ರತಿ ದಿನ 10 ರೈಲುಗಳು ಹೊರರಾಜ್ಯಕ್ಕೆ ಹೊರಡಲಿದ್ದು, ಒಟ್ಟು 126 ಶ್ರಮಿಕ ರೈಲುಗಳಲ್ಲಿ ರಾಜ್ಯದಿಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಉಚಿತವಾಗಿ ಪ್ರಯಾಣಿಸಲಿದ್ದಾರೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

ಶ್ರಮಿಕ ರೈಲುಗಳ ಮೂಲಕ ಬಿಹಾರ ಮತ್ತು ಒಡಿಶಾಕ್ಕೆ ತೆರಳಿದ ವಲಸೆ ಕಾರ್ಮಿಕರಿಗೆ ಕಂಟೈನ್ಮೆಂಟ್ ರೈಲು ನಿಲ್ದಾಣದಲ್ಲಿ ಭಾನುವಾರ ಆಹಾರ ಪೊಟ್ಟಣಗಳನ್ನು ವಿತರಿಸಿದ ಬಳಿಕ ಅವರು ಮಾತನಾಡಿದರು.

‘ಕಂಟೈನ್ಮೆಂಟ್ ರೈಲು ನಿಲ್ದಾಣದಿಂದ ಐದು ಶ್ರಮಿಕ ರೈಲುಗಳ ಮೂಲಕ ಏಳೂವರೆ ಸಾವಿರ ವಲಸೆ ಕಾರ್ಮಿಕರು ಭಾನುವಾರ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಒಂದು ರೈಲಿನಲ್ಲಿ ಒಂದೂವರೆ ಸಾವಿರ ಕಾರ್ಮಿಕರು ಪ್ರಯಾಣಿಸಿದ್ದಾರೆ. ಎರಡು ದಿನಗಳಿಗೆ ಬೇಕಾಗುವ ಆಹಾರ ಪೊಟ್ಟಣಗಳನ್ನು ಅವರಿಗೆ ವಿತರಿಸಲಾಗಿದೆ’ ಎಂದರು.

ADVERTISEMENT

‘ನಗರದ ವಿವಿಧ ಭಾಗಗಳಲ್ಲಿದ್ದ
ವಲಸೆ ಕಾರ್ಮಿಕರನ್ನು ಗುರುತಿಸಿ ಅವರಿಗೆ ಸರ್ಕಾರದ ವತಿಯಿಂದ ದಿನಸಿ, ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲಾಗಿತ್ತು. ಲಾಕ್‌ಡೌನ್‌ ಸಡಲಿಕೆ ನಂತರ ಕುಟುಂಬ ಸದಸ್ಯರನ್ನು ಭೇಟಿಯಾಗಲು ಊರಿಗೆ ತೆರಳಲು ಬಯಸಿರುವ ಕಾರ್ಮಿಕರಿಗೆ ರೈಲು ವ್ಯವಸ್ಥೆ ಮಾಡಲಾಗಿದೆ’ ಎಂದರು.

ಮಕ್ಕಳಿಗೆ ಚನ್ನಪಟ್ಟಣದ ಗೊಂಬೆ: ‘ರೈಲಿನಲ್ಲಿ ಪ್ರಯಾಣಿಸಿದ ಎಲ್ಲ ಮಕ್ಕಳಿಗೆ ರೈಲ್ವೆ ಇಲಾಖೆಯಿಂದ ಚನ್ನಪಟ್ಟಣದ ಗೊಂಬೆ ವಿತರಿಸಲಾಗುತ್ತಿದೆ. ವಿಮಾನ ಪ್ರಯಾಣದ ವೇಳೆ ಮಕ್ಕಳಿಗೆ ಆಟಿಕೆ ನೀಡುವ ಮಾದರಿಯಲ್ಲಿ ರೈಲಿನಲ್ಲೂ ವಲಸೆ ಕಾರ್ಮಿಕರ ಮಕ್ಕಳಿಗೆ ಮರದ ಗೊಂಬೆಗಳನ್ನು ನೀಡಲಾಗುತ್ತಿದೆ. ಇದರಿಂದ ನಮ್ಮ ರಾಜ್ಯದ ಕುಶಲಕರ್ಮಿಗಳ ಖ್ಯಾತಿ ಹೊರ ರಾಜ್ಯಗಳಿಗೂ ತಲುಪಿದಂತಾಗುತ್ತದೆ. ಎಲ್ಲ ರೈಲು ನಿಲ್ದಾಣಗಳಲ್ಲಿ ಚನ್ನಪಟ್ಟಣದ ಗೊಂಬೆ ಮಳಿಗೆ ತೆರೆಯಲಾಗಿದೆ‘ ಎಂದೂ ಅವರು ವಿವರಿಸಿದರು.

500 ಕಿಟ್‌ ಕಳುಹಿಸಿದ ಡಿಸಿಎಂ: ಲಾಕ್‌ಡೌನ್‌ನಿಂದಾಗಿ ಮುಂಬೈಯ ಧಾರಾವಿ ಕೊಳೆಗೇರಿಯಲ್ಲಿರುವ ಕನ್ನಡಿಗರು ತೀವ್ರ ಸಂಕಷ್ಟದಲ್ಲಿರುವ ಮಾಹಿತಿ ತಿಳಿದು ಅಶ್ವತ್ಥನಾರಾಯಣ ಅಲ್ಲಿಗೆ 500 ದಿನಸಿ ಕಿಟ್‌ಗಳನ್ನು ಕಳುಹಿಸಿದ್ದಾರೆ.

ದಿನಸಿ ಪದಾರ್ಥಗಳಿರುವ ಕಿಟ್‌ಗಳನ್ನು ಸ್ಥಳೀಯ ಮುಖಂಡರು ಸಂತ್ರಸ್ತರಿಗೆ ಭಾನುವಾರ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.