ADVERTISEMENT

ನೆರಮನೆಯಲ್ಲಿ ಕಳ್ಳತನ, ಅಕ್ಕ–ತಂಗಿ ಬಂಧನ: 14 ಚೂಡಿದಾರ್ ಜಪ್ತಿ

ಕದ್ದ ಹಣದಲ್ಲಿ ಖರೀದಿಸಿದ್ದ 14 ಚೂಡಿದಾರ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 16:46 IST
Last Updated 6 ಮಾರ್ಚ್ 2022, 16:46 IST
ಸಿದ್ದಾಪುರ ಪೊಲೀಸರು ಬಂಧಿಸಿರುವ ಆರೋಪಿಗಳು
ಸಿದ್ದಾಪುರ ಪೊಲೀಸರು ಬಂಧಿಸಿರುವ ಆರೋಪಿಗಳು   

ಬೆಂಗಳೂರು: ನೆರೆಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಅಕ್ಕ–ತಂಗಿ ಸೇರಿ ಮೂವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

‘ಸುಮಯಾ ತಾಜ್ (28), ಈಕೆಯ ಅಕ್ಕ ನಾಜೀಮಾ ತಾಜ್ (32) ಹಾಗೂ ಸಂಬಂಧಿ ಅಕ್ಬರ್ ಪಾಷಾ (38) ಬಂಧಿತರು. ಅವರಿಂದ ₹ 4.29 ಲಕ್ಷ ನಗದು, 51 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ 14 ಚೂಡಿದಾರ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೋಲಾರದ ಆರೋಪಿಗಳು, ಕೆಲಸಕ್ಕಾಗಿ ನಗರಕ್ಕೆ ಬಂದಿದ್ದರು. ಜಯನಗರ 1ನೇ ಹಂತದ ದಯಾನಂದನಗರದಲ್ಲಿ ವಾಸವಿದ್ದರು. ಬಹುಮಹಡಿ ಕಟ್ಟಡದ ಕೆಳ ಮಹಡಿಯಲ್ಲಿ ಸುಮಯಾ ಬಾಡಿಗೆಗಿದ್ದರು. ಎರಡನೇ ಮಹಡಿಯಲ್ಲಿ ದೂರುದಾರ ಜಬೀವುಲ್ಲಾ ಕುಟುಂಬವಿತ್ತು. ಅದೇ ಕಟ್ಟಡದ ಎದುರು ಮನೆಯಲ್ಲಿ ನಾಜೀಮಾ ನೆಲೆಸಿದ್ದರು.’

ADVERTISEMENT

‘ಜಬೀವುಲ್ಲಾ ಮನೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರು. ಮಗಳ ಮದುವೆಗೆಂದು ಲಾರಿ ಮಾರಿ, ಅದರಿಂದ ಬಂದಿದ್ದ ₹ 10 ಲಕ್ಷವನ್ನು ಮನೆಯಲ್ಲಿ ತಂದಿಟ್ಟಿದ್ದರು. ಮಹಡಿ ಬಳಿ ಆಟವಾಡುತ್ತಿದ್ದ ಅವರ ಮಗ, ‘ನಮ್ಮ ಮನೆಯಲ್ಲಿ ಹೆಚ್ಚು ಹಣವಿದೆ’ ಎಂದು ಹೇಳುತ್ತಿದ್ದ. ಅದನ್ನು ಕೇಳಿಸಿಕೊಂಡಿದ್ದ ಸುಮಯಾ ತಾಜ್, ಅಕ್ಕ ನಾಜೀಮಾಳಿಗೆ ವಿಷಯ ತಿಳಿಸಿದ್ದಳು. ಅವರಿಬ್ಬರು ಅಕ್ಬರ್ ಪಾಷಾ ಜೊತೆ ಸೇರಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು’ ಎಂದೂ ತಿಳಿಸಿದರು.

ರಾಡ್‌ನಿಂದ ಬೀರು ಒಡೆದಿದ್ದ ಆರೋಪಿಗಳು: ‘ಜಬೀವುಲ್ಲಾ ಮನೆಗೆ ಆಗಾಗ ಹೋಗಿ ಬರುತ್ತಿದ್ದ ಆರೋಪಿ ಸುಮಯಾ, ಹಣವಿಟ್ಟಿದ್ದ ಬೀರು ಬಗ್ಗೆ ತಿಳಿದುಕೊಂಡಿದ್ದಳು. ಫೆ. 19ರಂದು ಜಬೀವುಲ್ಲಾ, ಅವರ ಪತ್ನಿ ಹಾಗೂ ಮಗಳು ಹೊರಗಡೆ ಹೋಗಿದ್ದರು. ಮನೆಗೆ ಬೀಗ ಹಾಕಿರಲಿಲ್ಲ. ಮಗ ಮಾತ್ರ ಮಹಡಿಯಲ್ಲಿ ಆಟವಾಡುತ್ತಿದ್ದ. ಆತನ ಗಮನ ಬೇರೆಡೆ ಸೆಳೆದು ಆರೋಪಿಗಳು ಮನೆಯೊಳಗೆ ನುಗ್ಗಿದ್ದರು’ ಎಂದು ಪೊಲೀಸರು ಹೇಳಿದರು.

‘ಬೀರುವನ್ನು ರಾಡ್‌ನಿಂದ ಒಡೆದಿದ್ದ ಆರೋಪಿಗಳು, ₹ 2.34 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹ 10 ಲಕ್ಷ ನಗದು ಕದ್ದು ಪರಾರಿಯಾಗಿದ್ದರು. ಜಬೀವುಲ್ಲಾ ಸಂಜೆ ಮನೆಗೆ ಬಂದಾಗ, ಕಳ್ಳತನ ಸಂಗತಿ ಗೊತ್ತಾಗಿತ್ತು. ಠಾಣೆಗೆ ದೂರು ನೀಡಿದ್ದರು’ ಎಂದೂ ತಿಳಿಸಿದರು.

‘ಮನೆ ಸಮೀಪದ ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು’ ಎಂದೂ ಹೇಳಿದರು.

ಬಟ್ಟೆ ಖರೀದಿ: ‘ಐಷಾರಾಮಿ ಜೀವನ ನಡೆಸುವುದಕ್ಕಾಗಿ ಆರೋಪಿಗಳು ಕೃತ್ಯ ಎಸಗಿದ್ದರು. ಕದ್ದ ₹ 10 ಲಕ್ಷವನ್ನು ತಮ್ಮಲ್ಲೇ ಹಂಚಿಕೊಂಡಿದ್ದರು. ಅಕ್ಕ–ತಂಗಿ ಇಬ್ಬರೂ 14 ಚೂಡಿದಾರ್‌ ಬಟ್ಟೆಗಳನ್ನು ಖರೀದಿಸಿದ್ದರು. ಸ್ವಲ್ಪ ಹಣವನ್ನು ಕೋಲಾರದಲ್ಲಿರುವ ತಂದೆಗೆ ಕೊಟ್ಟಿದ್ದರು. ಸದ್ಯ ಚೂಡಿದಾರ್ ಜಪ್ತಿ ಮಾಡಲಾಗಿದೆ. ಅವರ ತಂದೆಯನ್ನು ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.