ADVERTISEMENT

‘ಎಲ್ಲ ಮಹಾನುಭಾವರ ಜಯಂತಿ ಆಚರಣೆ’

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ * ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 19:35 IST
Last Updated 14 ಜನವರಿ 2021, 19:35 IST
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಬಿ.ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು. ಸಚಿವ ಅರವಿಂದ ಲಿಂಬಾವಳಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸಚಿವ ಭೈರತಿ ಬಸವರಾಜ್ ಇದ್ದರು. –ಪ್ರಜಾವಾಣಿ ಚಿತ್ರ
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಬಿ.ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು. ಸಚಿವ ಅರವಿಂದ ಲಿಂಬಾವಳಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸಚಿವ ಭೈರತಿ ಬಸವರಾಜ್ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜನರಲ್ಲಿ ರಾಷ್ಟ್ರಪ್ರಜ್ಞೆ ಮತ್ತು ಸಮಾಜಪ್ರಜ್ಞೆ ಮೂಡಿಸುವ ದೃಷ್ಟಿಯಿಂದ ನಾಡಿನಲ್ಲಿ ಜನಿಸಿದ ಎಲ್ಲ ಮಹಾನುಭಾವರ ಜಯಂತಿಗಳನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಗುರುವಾರ ಆಯೋಜಿಸಿದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದರು.

‘ಶಿವಯೋಗಿ ಸಿದ್ಧರಾಮೇಶ್ವರ ಸೇರಿದಂತೆ ಶರಣರು ವಚನ ಸಾಹಿತ್ಯದ ಮೂಲಕ ವಾಸ್ತವದ ನೆಲೆಯಲ್ಲಿ ಜೀವನ
ದರ್ಶನ ಮಾಡಿಸಿದರು.ಅಂತಹ ಮಹಾನುಭಾವರ ಜಯಂತಿ ಆಚರಿಸುವ ಮೂಲಕ ಅವರ ವಿಚಾರಧಾರೆಗಳನ್ನು
ಜನರಿಗೆ ತಿಳಿಸಿ, ಜಾಗೃತಿ ಮೂಡಿಸು
ವುದು ಸರ್ಕಾರದ ಉದ್ದೇಶ’ ಎಂದರು.

ADVERTISEMENT

ಭೋವಿ ಗುರುಪೀಠದ ಸಿದ್ಧರಾಮೇಶ್ವರ ಸಂಸ್ಥಾನದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ಜಾತ್ರೆಯ ಮೂಲಕ ಆಚರಿಸುವ ಬದಲಾಗಿ ಜಾಗೃತಿಯ ರೂಪದಲ್ಲಿ ಆಚರಿಸಬೇಕು ಅತ್ಯಂತ ತಳಮಟ್ಟದ ಶ್ರಮಿಕ ವರ್ಗದವರನ್ನು ಹೊಂದಿರುವ ಸಮಾಜಕ್ಕೆ ಜಾಗೃತಿಯ ಅವಶ್ಯಕತೆ ಹೆಚ್ಚಾಗಿದೆ. ಎಲ್ಲ ನಾಯಕರೂ ಪಕ್ಷಬೇಧ ಮರೆತು, ಭೋವಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಹೇಳಿದರು.

ದುಡಿಯುವ ವರ್ಗಕ್ಕೆ ನೆರವು: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ‘ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳ ನಂತರ ಎರಡನೆಯವರಾಗಿ ಶಿವಯೋಗಿ ಸಿದ್ಧರಾಮೇಶ್ವರರು ಶೂನ್ಯ ಪೀಠವನ್ನು ಅಲಂಕರಿಸಿದರು. ಕಾಯಕಕ್ಕೆ ಹೆಸರಾದ ಶಿವಯೋಗಿ ಸಿದ್ಧರಾಮೇಶ್ವರರು 12ನೇ ಶತಮಾನದಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸಿ, ದುಡಿಯುವ ವರ್ಗಕ್ಕೆ ನೆರವು ನೀಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ‘ಸಿದ್ಧರಾಮೇಶ್ವರರ ಸಂದೇಶಗಳು ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಬದಲಾಗಿ ಇಡೀ ರಾಜ್ಯದ ಜನತೆ ಅವನ್ನು ಪಾಲಿಸಬೇಕಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.