ADVERTISEMENT

‘ಸಿಮ್ ಕೆವೈಸಿ’ ಸಂದೇಶ ನಂಬಿ ₹ 13.07 ಲಕ್ಷ ಕಳೆದುಕೊಂಡರು

​ಪ್ರಜಾವಾಣಿ ವಾರ್ತೆ
Published 24 ಮೇ 2021, 21:37 IST
Last Updated 24 ಮೇ 2021, 21:37 IST

ಬೆಂಗಳೂರು: ‘ನಿಮ್ಮ ಸಿಮ್ ಸದ್ಯದಲ್ಲೇ ನಿಷ್ಕ್ರಿಯವಾಗಲಿದ್ದು, ಕೂಡಲೇ ಸಿಮ್ ಕೆವೈಸಿ (ಗ್ರಾಹಕರ ಮಾಹಿತಿ) ಅಪ್‌ಡೇಟ್ ಮಾಡಿ ರೀಚಾರ್ಜ್ ಮಾಡಿಸಬೇಕು’ ಎಂದು ಮೊಬೈಲ್‌ಗೆ ಬಂದಿದ್ದ ಸಂದೇಶ ನಂಬಿ ನಗರದ ನಿವಾಸಿಗಳಿಬ್ಬರು ₹ 13.07 ಲಕ್ಷ ಕಳೆದುಕೊಂಡಿದ್ದಾರೆ.

ಈ ವಂಚನೆ ಸಂಬಂಧ ನಗರದ ವೈಟ್‌ಫೀಲ್ಡ್ ವಿಭಾಗ ಹಾಗೂ ಪಶ್ಚಿಮ ವಿಭಾಗ ಸೈಬರ್ ಕ್ರೈಂ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.

‘ತುಬರನಹಳ್ಳಿ ನಿವಾಸಿಯಾಗಿರುವ 75 ವರ್ಷದ ವೃದ್ಧರೊಬ್ಬರ ಮೊಬೈಲ್‌ಗೆ ಸಂದೇಶ ಬಂದಿತ್ತು. ಅದನ್ನು ನಂಬಿದ್ದ ಅವರು, ಆರೋಪಿಗಳು ತಿಳಿಸಿದ್ದ ಆ್ಯಪ್‌ನ್ನು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದರು. ಬ್ಯಾಂಕ್‌ ವಿವರವನ್ನು ಭರ್ತಿ ಮಾಡಿ ₹ 11 ರೀಚಾರ್ಜ್ ಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಆರೋಪಿಗಳು, ದೂರುದಾರರ ಬ್ಯಾಂಕ್‌ ಖಾತೆಗಳಿಂದ ಹಂತ ಹಂತವಾಗಿ ₹ 6.62 ಲಕ್ಷ ಡ್ರಾ ಮಾಡಿಕೊಂಡಿದ್ದಾರೆ’ ಎಂದು ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸರು ಹೇಳಿದರು.

ADVERTISEMENT

ಇನ್ನೊಂದು ಪ್ರಕರಣದಲ್ಲಿ ಚಂದ್ರಾಲೇಔಟ್ ನಿವಾಸಿಯಾಗಿರುವ 77 ವರ್ಷದ ವೃದ್ಧರೊಬ್ಬರು ಹಾಗೂ ಅವರ ಪತ್ನಿಯ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ₹ 6.45 ಲಕ್ಷ ಡ್ರಾ ಮಾಡಿಕೊಂಡು ವಂಚಿಸಲಾಗಿದೆ.

‘ಸಿಮ್ ಕೆವೈಸಿ ಅಪ್‌ಡೇಟ್‌ ಹೆಸರಿನಲ್ಲಿ ಆರೋಪಿಗಳು ಸಂದೇಶ ಕಳುಹಿಸಿ ವೃದ್ಧರನ್ನು ವಂಚಿಸಿದ್ದಾರೆ. ಇಂಥ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ವೃದ್ಧರು ಎಚ್ಚರಿಕೆ ವಹಿಸಬೇಕು’ ಎಂದು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.