ADVERTISEMENT

ಪಾದಚಾರಿ ಮೇಲ್ಸೇತುವೆಯಿಂದ ಜಿಗಿದು ಆರೋಪಿ ಸಾವು: ಎಸಿಪಿಯಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 19:31 IST
Last Updated 21 ಡಿಸೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೊಲೀಸ್‌ ಠಾಣೆಯಿಂದ ತಪ್ಪಿಸಿಕೊಂಡಿದ್ದ ಆರೋಪಿಯು ಪಾದಚಾರಿ ಮೇಲ್ಸೇತುವೆಯಿಂದ ಜಿಗಿದು ಮೃತಪಟ್ಟ ಪ್ರಕರಣದ ತನಿಖೆಯ ಹೊಣೆಯನ್ನು ವೈಟ್‌ಫೀಲ್ಡ್‌ ಉಪ ವಿಭಾಗದ ಎಸಿಪಿಗೆ ವಹಿಸಲಾಗಿದೆ.

‘ಆರೋಪಿಯು ತಪ್ಪಿಸಿಕೊಂಡಿದ್ದಾಗ ಕರ್ತವ್ಯದಲ್ಲಿದ್ದವರು ಯಾರು, ಠಾಣೆಯ ಸಿಬ್ಬಂದಿಯಿಂದ ಲೋಪವಾಗಿದೆಯೇ ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಮುಗಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಕೆ.ಆರ್‌.ಪುರದ ವಿಜಿನಾಪುರ ನಿವಾಸಿಯಾಗಿದ್ದ ಶಕ್ತಿವೇಲು (32) ಎಂಬಾತನನ್ನು ಪತ್ನಿಯ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದರು. ತಮಿಳುನಾಡು ಮೂಲದ ಶಕ್ತಿವೇಲು, ಏಳು ವರ್ಷಗಳ ಹಿಂದೆ ಸಂಗೀತಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ. ಕೆಲ ತಿಂಗಳುಗಳಿಂದ ದಂಪತಿಯ ನಡುವೆ ಜಗಳ ಪದೇ ಪದೇ ನಡೆಯುತ್ತಿತ್ತು. ಪತಿಯ ಕಿರುಕುಳದಿಂದ ಬೇಸತ್ತಿದ್ದ ಸಂಗೀತಾ ಇದೇ 18ರಂದು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಮಗಳ ಸಾವಿಗೆ ಅಳಿಯನೇ ಕಾರಣ ಎಂದು ಸಂಗೀತಾ ಅವರ ಪೋಷಕರು ಠಾಣೆಗೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದೆವು. ಸೋಮವಾರ ಬೆಳಿಗ್ಗೆ ಶೌಚಾಲಯಕ್ಕೆ ಹೋಗುವುದಾಗಿ ಕೇಳಿಕೊಂಡಿದ್ದರಿಂದ ಪಾಳಿಯಲ್ಲಿದ್ದ ಕಾನ್‌ಸ್ಟೆಬಲ್‌ವೊಬ್ಬರು ಶೌಚಾಲಯದ ಬಳಿ ಕರೆದೊಯ್ದಿದ್ದರು. ಆತನನ್ನು ಹಿಂದಕ್ಕೆ ಕರೆತರುತ್ತಿದ್ದ ವೇಳೆ ಠಾಣೆಯಿಂದ ಹೊರಗೆ ಓಡಿ ಹೋಗಿದ್ದ. ಕೂಡಲೇ ಸಿಬ್ಬಂದಿ ದ್ವಿಚಕ್ರವಾಹನದಲ್ಲಿ ಆತನನ್ನು ಬೆನ್ನಟ್ಟಿದ್ದರು. ಪೊಲೀಸರು ಬರುತ್ತಿರುವುದನ್ನು ಕಂಡ ಆತ ಹಳೆ ಮದ್ರಾಸ್‌ ರಸ್ತೆಯ ಐಟಿಐ ಕಾರ್ಖಾನೆ ಬಳಿಯ ಪಾದಚಾರಿ ಮೇಲ್ಸೇತುವೆ ಮೇಲಿಂದ ರಸ್ತೆಗೆ ಜಿಗಿದಿದ್ದ. ಈ ವೇಳೆ ಆತನ ತಲೆ, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ರಸ್ತೆಯಲ್ಲಿ ಸಾಗುತ್ತಿದ್ದ ಕಾರಿಗೂ ಡಿಕ್ಕಿ ಹೊಡೆದಿದ್ದ ಆರೋಪಿ ಸ್ಥಳದಲ್ಲೇ ಮೃತಪಟ್ಟಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.