ADVERTISEMENT

ಅನ್ಯ ಉದ್ದೇಶಕ್ಕೆ ಸಮಾಜ ಕಲ್ಯಾಣ ಇಲಾಖೆ ಜಾಗ ಬಳಸಲು ಯತ್ನ

ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 19:11 IST
Last Updated 30 ಅಕ್ಟೋಬರ್ 2020, 19:11 IST

ಬೆಂಗಳೂರು: ಮಹದೇವಪುರ ಕ್ಷೇತ್ರದ ಕಾಟಮ್‌ನಲ್ಲೂರು ಸಮೀಪ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಕ್ಕೆ ಮೀಸಲಿಟ್ಟಿರುವ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಕಾಟಮ್‌ನಲ್ಲೂರು ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ 18 ಗುಂಟೆಯನ್ನು ಸರ್ಕಾರ ಮಂಜೂರು ಮಾಡಿತ್ತು. ಇಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆ ಯೋಜನೆ ರೂಪಿಸಿದೆ. ಮೊದಲ ಹಂತವಾಗಿ ಕಾಂಪೌಂಡ್ ನಿರ್ಮಿಸಲು ₹48 ಲಕ್ಷ ಹಣ ಕೂಡ ಬಿಡುಗಡೆ ಮಾಡಿದೆ.

ಈ ನಡುವೆ, ಅಕ್ಟೋಬರ್ 7ರಂದು ಶಾಸಕ ಅರವಿಂದ ಲಿಂಬಾವಳಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ವಿದ್ಯಾರ್ಥಿ ನಿಲಯಕ್ಕೆ ಬದಲಿ ಜಾಗ ಗುರುತಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶಾಸಕರ ಸೂಚನೆಯಂತೆ ಬದಲಿ ಜಾಗ (1 ಎಕರೆ) ಗುರುತಿಸಿ ಮಂಜೂರು ಮಾಡಿಕೊಡಲುತಹಶೀಲ್ದಾರ್ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಬೆಂಗಳೂರು ಪೂರ್ವ ತಾಲ್ಲೂಕಿನ ಸಹಾಯಕ ನಿರ್ದೇಶಕರು ಇದೇ 9ರಂದು ಪತ್ರ ಬರೆದಿದ್ದಾರೆ.

ADVERTISEMENT

ಸಮಾಜ ಕಲ್ಯಾಣ ಇಲಾಖೆಗೆ ಬೇರೆ ಜಾಗ ನೀಡಿ ಹೆದ್ದಾರಿ ಪಕ್ಕದಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಈ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಪಟ್ಟಭದ್ರರು ಮುಂದಾಗಿದ್ದಾರೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘ ಆರೋಪಿಸಿದೆ. ‘ಸಮಾಜ ಕಲ್ಯಾಣ ಇಲಾಖೆ ಜಾಗ ಕಬಳಿಸಲು ಮುಂದಾದರೆ ಅಂತವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದೆ.

ಈ ಸಂಬಂಧ ನಗರ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿರುವ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹದೇವಸ್ವಾಮಿ, ‘ಕಾಂಪೌಂಡ್ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡುವಾಗ ಜಿಲ್ಲಾಧಿಕಾರಿ ವಿಧಿಸಿರುವ ಷರತ್ತಿನ ಪ್ರಕಾರ ನಿವೇಶನ ಕಸಿದುಕೊಳ್ಳಲು ಮುಂದಾದವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಮೀಸಲಿಟ್ಟಿರುವ ಜಾಗವನ್ನು ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡುವ ಉದ್ದೇಶಕ್ಕೇ ಬಳಕೆ ಮಾಡಬೇಕು. ಇಲ್ಲದಿದ್ದರೆ ದಲಿತ ಸಂಘಟನೆಗಳು ಒಂದಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.