ADVERTISEMENT

ಒಂಟಿ ವೃದ್ಧೆ ಕೊಲೆ ಪ್ರಕರಣ: ಸಾಲ ತೀರಿಸಲು ಮನೆ ಒಡತಿ ಹತ್ಯೆ

ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 20:37 IST
Last Updated 24 ಜುಲೈ 2022, 20:37 IST
ಯಶೋಧಮ್ಮ
ಯಶೋಧಮ್ಮ   

ಬೆಂಗಳೂರು: ಚನ್ನಮ್ಮನ ಕೆರೆ ಅಚ್ಚು ಕಟ್ಟು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಯಶೋಧಮ್ಮ (75) ಕೊಲೆ ಪ್ರಕ ರಣ ಭೇದಿಸಿರುವ ಪೊಲೀಸರು, ಬಾಡಿಗೆ ದಾರ ಜೈ ಕಿಶನ್ ಎಂಬಾತನನ್ನು ಬಂಧಿಸಿದ್ದಾರೆ.

‘ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಮಾರುಕಟ್ಟೆ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದ ಕಿಶನ್, ವೃದ್ಧೆ ಯಶೋಧಮ್ಮ ಒಡೆತನದ ಮನೆಯಲ್ಲಿ ಬಾಡಿಗೆಗಿದ್ದ. ಜುಲೈ 1ರಂದು ಯಶೋಧಮ್ಮ ಅವರನ್ನು ಕೊಲೆ ಮಾಡಿ, ಚಿನ್ನಾಭರಣ ದೋಚಿದ್ದ. ತನಿಖೆಗೆ ರಚಿಸಲಾಗಿದ್ದ ವಿಶೇಷ ತಂಡ, ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ. ಕೃಷ್ಣಕಾಂತ್ ಹೇಳಿದರು.

‘ವಿನಾಯಕ ನಗರದ 5ನೇ ಅಡ್ಡರಸ್ತೆಯಲ್ಲಿ ಬಹುಮಹಡಿ ಕಟ್ಟಡ ಹೊಂದಿದ್ದ ಯಶೋಧಮ್ಮ, ನೆಲ ಮಹಡಿ ಮನೆಯಲ್ಲಿ ಒಂಟಿಯಾಗಿ ವಾಸವಿದ್ದರು. ಇವರ ಒಬ್ಬನೇ ಮಗ, ಕತ್ರಿಗುಪ್ಪೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಆಗಾಗ ತಾಯಿ ಮನೆಗೆ ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು’ ಎಂದೂ ಡಿಸಿಪಿ ತಿಳಿಸಿದರು.

ADVERTISEMENT

ಷೇರು ವ್ಯವಹಾರದಲ್ಲಿ ನಷ್ಟ: ‘ಯಶೋಧಮ್ಮ ಅವರ ಬಹುಮಹಡಿ ಕಟ್ಟಡದ ಎರಡನೇ ಮಹಡಿ ಮನೆಯಲ್ಲಿ ನಾಲ್ಕು ವರ್ಷಗಳಿಂದ ಕಿಶನ್ ಬಾಡಿಗೆಗಿದ್ದ. ಆನ್‌ಲೈನ್ ಷೇರು ವ್ಯವಹಾರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಈತ, ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದ. ಆದರೆ, ಹಣ ವಾಪಸು ಬರದೇ ನಷ್ಟ ಅನುಭವಿಸಿದ್ದ’ ಎಂದು ಡಿಸಿಪಿ ಹೇಳಿದರು.

‘ಸಾಲದ ಹಣ ವಾಪಸು ಕೊಡುವಂತೆ ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡಲಾರಂಭಿಸಿದ್ದರು. ಇದೇ ವೇಳೆಯೇ ಯಶೋಧಮ್ಮ ಬಳಿಯೂ ಆರೋಪಿ ₹ 40 ಸಾವಿರ ಸಾಲ ಪಡೆದಿದ್ದ. ಅದನ್ನೂ ವಾಪಸು ಕೊಟ್ಟಿರಲಿಲ್ಲ. ಈ ವಿಚಾರಕ್ಕೂ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು’ ಎಂದೂ ಹೇಳಿದರು.

ಸಾಲ ತೀರಿಸಲು ಕೊಲೆಗೆ ಸಂಚು: ‘ಯಶೋಧಮ್ಮ ಒಂಟಿಯಾಗಿರುವುದನ್ನು ತಿಳಿದಿದ್ದ ಆರೋಪಿ, ಅವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ’ ಎಂದು ಕೃಷ್ಣಕಾಂತ್ ತಿಳಿಸಿದರು.

‘ಸಾಲ ವಾಪಸು ಕೊಡುವ ಸೋಗಿನಲ್ಲಿ ಜುಲೈ 1ರಂದು ಆರೋಪಿ, ವೃದ್ಧೆ ಮನೆಗೆ ಹೋಗಿದ್ದ. ಜಗಳ ತೆಗೆದು ಯಶೋಧಮ್ಮ ಮೇಲೆ ಹಲ್ಲೆ ಮಾಡಿದ್ದ ಚಾಕುವಿನಿಂದ 60 ಬಾರಿ ವೃದ್ಧೆಗೆ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ವೃದ್ಧೆ ಮೃತಪಟ್ಟ ಬಳಿಕ ಆರೋಪಿ ಅಲ್ಲಿಂದ ತನ್ನ ಮನೆಗೆ ಹೋಗಿದ್ದ’ ಎಂದೂ ಹೇಳಿದರು.

ಆಭರಣ ಅಡವಿಟ್ಟು ಸಿಕ್ಕಿಬಿದ್ದ: ‘ಮತ್ತೊಂದು ಮನೆಯಲ್ಲಿ ಬಾಡಿಗೆ ಗಿದ್ದವರು, ವೃದ್ಧೆ ಮೃತದೇಹ ನೋಡಿ ಠಾಣೆಗೆ ಮಾಹಿತಿ ನೀಡಿದ್ದರು. ತನಿಖೆ ಗೆಂದು ಪೊಲೀಸರು ಸ್ಥಳಕ್ಕೆ ಹೋದಾಗ ಆರೋಪಿ ಅಮಾಯಕನಂತೆ ವರ್ತಿಸಿದ್ದ. ಯಾವುದೇ ಅನುಮಾನ ಬಾರದಂತೆ ನಟಿಸಿದ್ದ’ ಎಂದು ಕೃಷ್ಣಕಾಂತ್ ತಿಳಿಸಿದರು. ‘ವೃದ್ಧೆಯಿಂದ ದೋಚಿದ್ದ ಆಭರಣ ವನ್ನು ಆರೋಪಿ, ಚಿನ್ನಾಭರಣ ಮಳಿಗೆಯೊಂದರಲ್ಲಿ ಅಡವಿಟ್ಟಿದ್ದ. ಇದೇ ಸುಳಿವು ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.