ADVERTISEMENT

ಕಂಟೋನ್ಮೆಂಟ್‌ ನಿಲ್ದಾಣದಲ್ಲಿ ಶೇ 72 ಸೌರವಿದ್ಯುತ್‌: ಅಶುತೋಷ್‌ ಕುಮಾರ್‌ ಸಿಂಗ್‌

ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶುತೋಷ್‌ ಕುಮಾರ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 15:21 IST
Last Updated 19 ಜೂನ್ 2025, 15:21 IST
ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಶುತೋಷ್‌ ಕುಮಾರ್‌ ಸಿಂಗ್‌ ವಿವರಿಸಿದರು. ಪ್ರೇಮ್ ನಾರಾಯಣ್, ಅಶುತೋಷ್‌ ಮಾಥುರ್ ಉಪಸ್ಥಿತರಿದ್ದರು
ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಶುತೋಷ್‌ ಕುಮಾರ್‌ ಸಿಂಗ್‌ ವಿವರಿಸಿದರು. ಪ್ರೇಮ್ ನಾರಾಯಣ್, ಅಶುತೋಷ್‌ ಮಾಥುರ್ ಉಪಸ್ಥಿತರಿದ್ದರು   

ಬೆಂಗಳೂರು: ನಗರದ ಕಂಟೋನ್ಮೆಂಟ್‌ ನಿಲ್ದಾಣಕ್ಕೆ ಅವಶ್ಯ ಇರುವ ವಿದ್ಯುತ್‌ನಲ್ಲಿ ಶೇಕಡ 72ರಷ್ಟನ್ನು ಸೌರವಿದ್ಯುತ್‌ ಮೂಲಕ ಪಡೆಯಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶುತೋಷ್‌ ಕುಮಾರ್‌ ಸಿಂಗ್‌ ತಿಳಿಸಿದರು.

ಬೆಂಗಳೂರು ವಿಭಾಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಂಟೋನ್ಮೆಂಟ್‌ ನಿಲ್ದಾಣಕ್ಕೆ ತಿಂಗಳಿಗೆ 3.11 ಲಕ್ಷ ಯೂನಿಟ್‌ ವಿದ್ಯುತ್‌ ಬೇಕಾಗುತ್ತದೆ. ಇದರಲ್ಲಿ ಮಹಡಿ ಮೇಲೆ 1.852 ಕಿಲೊವಾಟ್‌ ಸಾಮರ್ಥ್ಯದ ಸೌರ ಫಲಕಗಳನ್ನು  ಅಳವಡಿಸಲಾಗಿದ್ದು, ತಿಂಗಳಿಗೆ 2.25 ಲಕ್ಷ ಯೂನಿಟ್‌ ಉತ್ಪಾದಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಕಂಟೋನ್ಮೆಂಟ್‌ ರೈಲು ನಿಲ್ದಾಣವನ್ನು ₹ 484 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಯಶವಂತಪುರ ರೈಲು ನಿಲ್ದಾಣವನ್ನು ₹ 377.86 ಕೋಟಿ ವೆಚ್ಚದಲ್ಲಿ ಪುನರ್‌ನಿರ್ಮಿಸಲಾಗುತ್ತಿದೆ. ಅಲ್ಲಿ ಇವಿ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಸ್ಟೇಷನ್‌ ಅಳವಡಿಸಲಾಗುತ್ತಿದ್ದು, ಐದು ಚಾರ್ಜಿಂಗ್‌ ಪಾಯಿಂಟ್‌ಗಳಿರಲಿವೆ. ಎರಡೂ ನಿಲ್ದಾಣಗಳ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ. ಮಳೆನೀರಿನ ಚರಂಡಿ, ಅಗ್ನಿಶಾಮಕ ಸುರಕ್ಷತಾ ಮಾರ್ಗ ಸೇರಿದಂತೆ ಕಾಮಗಾರಿಗಳು ಶೇ 97ರಷ್ಟು ಪೂರ್ಣಗೊಂಡಿವೆ ಎಂದರು.

ಮೆಜೆಸ್ಟಿಕ್‌ನ ಕೆಎಸ್‌ಆರ್‌ ನಿಲ್ದಾಣದಲ್ಲಿ ಅಂದಾಜು ₹ 222 ಕೋಟಿ ವೆಚ್ಚದಲ್ಲಿ ಎರಡು ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಕಟ್ಟಡಗಳ ಪುನರ್‌ನಿರ್ಮಾಣ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುವುದು. ಹಂತಹಂತವಾಗಿ ಕೆಎಸ್‌ಆರ್‌ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ವಿವರಿಸಿದರು.

ಯಶವಂತಪುರ–ಚನ್ನಸಂದ್ರ ದ್ವಿಪಥ ಯೋಜನೆಯು ₹ 683.57 ಕೋಟಿ ವೆಚ್ಚದಲ್ಲಿ, ಬೈಯ್ಯಪ್ಪನಹಳ್ಳಿ–ಹೊಸೂರು ದ್ವಿಪಥ ಯೋಜನೆಯು ₹ 1,148 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಎರಡೂ ಕಾಮಗಾರಿಗಳನ್ನು ಕೆ–ರೈಡ್ ಕೈಗೊಳ್ಳುತ್ತಿದೆ. ಮಾರಿಕುಪ್ಪಂ– ಕುಪ್ಪಂ 23.7 ಕಿ.ಮೀ. ಹೊಸಮಾರ್ಗವನ್ನು ಅಂದಾಜು ₹ 515 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಬೆಟ್ಟಹಲಸೂರು–ರಾಜಾನುಕುಂಟೆ ಬೈಪಾಸ್‌ ಮಾರ್ಗ ನಿರ್ಮಿಸುವ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರಾದ ಅಶುತೋಷ್‌ ಮಾಥುರ್, ಪರೀಕ್ಷಿತ್ ಮೋಹನ್ ಪುರಿಯಾ, ಮುಖ್ಯ ಎಂಜಿನಿಯರ್ (ನಿರ್ಮಾಣ) ಪ್ರೇಮ್ ನಾರಾಯಣ್, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ವೃತ್ತ ರೈಲು: ಆಗಸ್ಟ್‌ನಲ್ಲಿ ಡಿಪಿಆರ್‌ ಸಲ್ಲಿಕೆ

ನಗರದ ಸುತ್ತಮುತ್ತಲಿನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ವೃತ್ತ ರೈಲು ಸಂಪರ್ಕ ಜಾಲವನ್ನು (ಸರ್ಕ್ಯುಲರ್‌ ರೈಲ್ವೆ) 7 ಹಂತಗಳಲ್ಲಿ ನಿರ್ಮಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ತಯಾರಿಸಲಾಗುತ್ತಿದ್ದು ಆಗಸ್ಟ್‌ನಲ್ಲಿ ರೈಲ್ವೆ ಮಂಡಳಿಗೆ ಸಲ್ಲಿಸಲಾಗುವುದು ಎಂದು ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಅಶುತೋಷ್‌ ಕುಮಾರ್‌ ಸಿಂಗ್‌ ಮಾಹಿತಿ ನೀಡಿದರು. ನಿಡವಂದ–ಒಡ್ಡರಹಳ್ಳಿ (42 ಕಿ.ಮೀ.) ಒಡ್ಡರಹಳ್ಳಿ–ದೇವನಹಳ್ಳಿ (25 ಕಿ.ಮೀ.) ದೇವನಹಳ್ಳಿ–ಮಾಲೂರು (50 ಕಿ.ಮೀ.) ಮಾಲೂರು–ಹೀಲಲಿಗೆ (52 ಕಿ.ಮೀ.) ಹೆಜ್ಜಾಲ–ಸೋಲೂರು (43 ಕಿ.ಮೀ.) ಸೋಲೂರು–ನಿಡವಂದ (34 ಕಿ.ಮೀ.) ಹಂತಗಳಲ್ಲಿ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.

ಅಂತಿಮ ಸ್ಥಳ ಸಮೀಕ್ಷೆ ಮಂಜೂರಾದ ಯೋಜನೆಗಳು

* ಯಲಹಂಕ–ದೇವನಹಳ್ಳಿ 23.7 ಕಿ.ಮೀ. ದ್ವಿಪಥ ಮಾರ್ಗ 

* ದೇವನಹಳ್ಳಿ–ಕೋಲಾರ–ಬಂಗಾರಪೇಟೆ 125 ಕಿ.ಮೀ. ದ್ವಿಪಥ ಮಾರ್ಗ

* ವೈಟ್‌ಫೀಲ್ಟ್‌–ಬಂಗಾರಪೇಟೆ 47 ಕಿ.ಮೀ. ಚತುಷ್ಪಥ ನಿರ್ಮಾಣ

* ಬೈಯ್ಯಪ್ಪನಹಳ್ಳಿ–ಹೊಸೂರು 48.5 ಕಿ.ಮೀ. ಚತುಷ್ಪಥ ನಿರ್ಮಾಣ

* ಬೆಂಗಳೂರು–ತುಮಕೂರು 70 ಕಿ.ಮೀ. ಚತುಷ್ಪಥ ನಿರ್ಮಾಣ

* ಚಿಕ್ಕಬಾಣಾವರ–ಕುಣಿಗಲ್‌–ಹಾಸನ 166 ಕಿ.ಮೀ. ದ್ವಿಪಥ ಯೋಜನೆ

* ಬೆಂಗಳೂರು–ಮೈಸೂರು 137 ಕಿ.ಮೀ. ಚತುಷ್ಪಥ ನಿರ್ಮಾಣ

* ಬಂಗಾರಪೇಟೆ–ಜೋಲಾರಪೇಟೆ 72 ಕಿ.ಮೀ. ಚತುಷ್ಪಥ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.