ADVERTISEMENT

ಕಸ ವಿಲೇವಾರಿ ಟೆಂಡರ್‌– ಷರತ್ತು ಬದಲಿಸಲಿ

ಗುತ್ತಿಗೆದಾರರ ಅಭಿಪ್ರಾಯಕ್ಕೂ ಮನ್ನಣೆ ನೀಡಲಿದೆ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 19:09 IST
Last Updated 3 ಡಿಸೆಂಬರ್ 2018, 19:09 IST

ಬೆಂಗಳೂರು: ಕಸ ವಿಲೇವಾರಿಯನ್ನು ಗುತ್ತಿಗೆ ನೀಡಲು ಮುಂದಾಗಿರುವ ಬಿಬಿಎಂಪಿ ಈ ತಿಂಗಳ ಅಂತ್ಯದೊಳಗೆ ಟೆಂಡರ್‌ ಕರೆಯಲು ಸಿದ್ಧತೆ ನಡೆಸಿದೆ. ಈ ಹಿಂದೆ ಟೆಂಡರ್‌ ಕರೆದಾಗ ಗುತ್ತಿಗೆದಾರರು ಆಸಕ್ತಿ ತೋರಿಸದ ಕಾರಣ, ಷರತ್ತುಗಳಲ್ಲಿ ಕೆಲವೊಂದು ಬದಲಾವಣೆ ಮಾಡಲು ಮುಂದಾಗಿದೆ.

ಮೂರು ವರ್ಷಗಳಲ್ಲಿ ಮೂರು ಬಾರಿ ಟೆಂಡರ್‌ ಕರೆಯಲಾಗಿತ್ತು. ಆದರೆ, ಒಬ್ಬ ಗುತ್ತಿಗೆದಾರರ ಭಾಗವಹಿಸಿರಲಿಲ್ಲ. ಈ ಬಾರಿ ಹಾಗಾಗದಂತೆ ತಡೆಯಲು ಪಾಲಿಕೆ ಮುನ್ನೆಚ್ಚರಿಕೆ ವಹಿಸಿದೆ. ಟೆಂಡರ್‌ ಷರತ್ತುಗಳನ್ನು ನಿಗದಿಪಡಿಸುವ ಕುರಿತು ಅವರ ಅಭಿಪ್ರಾಯವನ್ನೂ ಪಡೆದಿದೆ. ಪಾಲಿಕೆಯ ಘನ ತ್ಯಾಜ್ಯ ವಿಭಾಗದ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದ್ದಾರೆ.

ಈ ಹಿಂದಿನ ಟೆಂಡರ್‌ ಷರತ್ತಿನ ಪ್ರಕಾರ ನಿರ್ದಿಷ್ಟ ವಾರ್ಡ್‌ಗಳ ಗುತ್ತಿಗೆಯನ್ನು 1 ವರ್ಷದ ಅವಧಿಗೆ ಸೀಮಿತಗೊಳಿಸಲಾಗಿತ್ತು. ಇದಕ್ಕೆ ಗುತ್ತಿಗೆದಾರರ ಸಹಮತವಿರಲಿಲ್ಲ. ಗುತ್ತಿಗೆ ಅವಧಿಯನ್ನು ಕನಿಷ್ಠ ಮೂರು ವರ್ಷಗಳಿಗೆ ಹಚ್ಚಿಸುವಂತೆ ಅವರು ಬೇಡಿಕೆ ಮುಂದಿಟ್ಟಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ADVERTISEMENT

ಬಿಲ್‌ ಪಾವತಿಗೂ ಗಡುವು: ಈ ಹಿಂದೆ ಐದಾರು ತಿಂಗಳು ಬಿಲ್‌ ಪಾವತಿ ಆಗದೇಗುತ್ತಿಗೆದಾರರು ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗಿ, ಸಕಾಲದಲ್ಲಿ ಬಿಲ್‌ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಗುತ್ತಿಗೆದಾರರು ಸಭೆಯಲ್ಲಿ ಒತ್ತಾಯಿಸಿದ್ದರು. ‘ಬಿಲ್‌ ಪಾವತಿ ಮೂರು ತಿಂಗಳಿಗಿಂತ ಹೆಚ್ಚು ವಿಳಂಬವಾಗುವಂತಿಲ್ಲ’ ಎಂಬ ಷರತ್ತನ್ನು ಸೇರಿಸುವ ಬಗ್ಗೆಯೂ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಹಿಂದಿನ ಷರತ್ತುಗಳ ಪ್ರಕಾರ ಗುತ್ತಿಗೆದಾರರು ಸ್ವಂತ ಕಾಂಪ್ಯಾಕ್ಟರ್ ಹಾಗೂ ಆಟೊಟಿಪ್ಪರ್‌ಗಳನ್ನು ಹೊಂದಿರಬೇಕಿತ್ತು. ಈ ವಾಹನಗಳನ್ನು ಬಾಡಿಗೆಗೆ ಪಡೆಯುವುದಕ್ಕೂ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯೂ ಗುತ್ತಿಗೆದಾರರಿಂದ ವ್ಯಕ್ತವಾಗಿತ್ತು. ಇದಕ್ಕೂ ಅಧಿಕಾರಿಗಳು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.

‘ಕಸ ವಿಲೇವಾರಿ ಟೆಂಡರ್‌ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಯಾವ ಷರತ್ತು ವಿಧಿಸಲಾಗುತ್ತಿದೆ ಎಂಬುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಷರತ್ತುಗಳ ಬಗ್ಗೆ ಗುತ್ತಿಗೆದಾರರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದೇವೆ. ನಗರದ ಕಸ ವಿಲೇವಾರಿ ವ್ಯವಸ್ಥೆಯನ್ನು ಹದ್ದುಬಸ್ತಿಗೆ ತರುವುದು ನಮ್ಮ ಉದ್ದೇಶ’ ಎಂದು ಪಾಲಿಕೆಯ ಹೆಚ್ಚುವರಿ ಆಯುಕ್ತ ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.