ADVERTISEMENT

ಭೂಪರಿಹಾರ ಹೆಚ್ಚಳಕ್ಕೆ ಕ್ರಮ: ಸೋಮಶೇಖರ್‌

ಕೆಐಎಡಿಬಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆ: ಸಚಿವ ಸೋಮಶೇಖರ್‌ ಆಶ್ವಾಸನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:51 IST
Last Updated 24 ಫೆಬ್ರುವರಿ 2020, 19:51 IST
ಎಸ್.ಟಿ.ಸೋಮಶೇಖರ್‌
ಎಸ್.ಟಿ.ಸೋಮಶೇಖರ್‌   

ಬೆಂಗಳೂರು: ‘ಯಶವಂತಪುರ ವಿಧಾನಸಭೆ ಕ್ಷೇತ್ರದ ಗೋಣಿಪುರ, ತಿಪ್ಪೂರು ಹಾಗೂ ಲಿಂಗಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ನೈಸ್ ಟೌನ್ ಶಿಪ್-1ರ ನಿರ್ಮಾಣಕ್ಕಾಗಿ ರೈತರಿಂದ ಸ್ವಾಧೀನಪಡಿಸಿಕೊಂಡ‌ ಭೂಮಿಗೆ ಹೆಚ್ಚು ಪರಿಹಾರ ನಿಗದಿಪಡಿಸಲು ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಅಧಿಕಾರಿಗಳೊಂದಿಗೆ ನಗರದಲ್ಲಿ ಸಭೆ ನಡೆಸಿದ ಸಚಿವರು.‘ಈ ಯೋಜನೆಗೆ ಭೂಮಿ ಬಿಟ್ಟು
ಕೊಟ್ಟ ರೈತರಿಗೆ ಪ್ರತಿ ಎಕರೆಗೆ ತಲಾ ₹ 40 ಲಕ್ಷದಿಂದ ₹ 41 ಲಕ್ಷ ಪರಿಹಾರ ನೀಡಿರುವುದು ತೀರಾ ಕಡಿಮೆ
ಯಾಯಿತು. ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಅಧಿಕಾರಿಗಳೇ ಹೆಚ್ಚು ಪರಿಹಾರ‌ ನಿಗದಿಪಡಿಸಬೇಕಿತ್ತು’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ‘ಈ ಕುರಿತು ಸಂಪುಟ ಉಪ ಸಮಿತಿಯಲ್ಲೂ ಚರ್ಚೆಯಾಗಿದೆ. ಹೆಚ್ಚಿನ ಪರಿಹಾರ ನೀಡಬೇಕು ಎಂಬ ಸಲಹೆ ವ್ಯಕ್ತವಾಗಿದೆ. ಈ ಬಗ್ಗೆ ಇನ್ನಷ್ಟು ಚರ್ಚಿಸಿ‌ ನಿರ್ಧಾರಕ್ಕೆ‌ ಬರಲಾಗುವುದು’ ಎಂದು ತಿಳಿಸಿದರು.

‘ಕೆಂಗೇರಿ ಸರ್ವೆ ನಂಬರ್‌ 168 ರಲ್ಲಿ 28 ಎಕರೆ 33 ಗುಂಟೆ ಜಮೀನನ್ನು ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌(ಬಿಎಂಐಸಿ) ಯೋಜನೆಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು 1992-93 ರಲ್ಲೇ ಆದೇಶ ಹೊರಡಿಸಿದ್ದರು. ಇಲ್ಲಿ 2 ಎಕರೆ 33 ಗುಂಟೆಯನ್ನು ಸ್ಮಶಾನಕ್ಕೆ‌ ಕಾಯ್ದಿರಿಸುವಂತೆ 1999ರಲ್ಲಿ ಶಿಫಾರಸು ಮಾಡಲಾಗಿತ್ತು. ಈ ಜಾಗವನ್ನು ನೈಸ್ ಸಂಸ್ಥೆಯು ರಸ್ತೆ ನಿರ್ಮಾಣಕ್ಕೆ‌ ಬಳಸಿಲ್ಲ. 2 ಎಕರೆ ಜಾಗ ಸ್ಮಶಾನವಾಗಿ ಬಳಕೆಯಾಗುತ್ತಿದ್ದರೂ ಸರ್ಕಾರಿ ದಾಖಲೆಗಳಲ್ಲಿ ಈ ಬಗ್ಗೆ ಉಲ್ಲೇಖವಾಗಿಲ್ಲ. ಈ ಕುರಿತು ಪರಿಶೀಲಿಸಬೇಕು’ ಎಂದು‌ ಸೂಚಿಸಿದರು.

ADVERTISEMENT

‘ಕುಂಬಳಗೋಡು ಕೈಗಾರಿಕಾ ಪ್ರದೇಶವನ್ನು ₹ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಬಿ.ಎಂ‌. ಕಾವಲ್ ಸರ್ವೆ ನಂಬರ್‌ 26ರಲ್ಲಿನ ಹೊಸಪಾಳ್ಯ ಕಾಲೊನಿ ಗ್ರಾಮದಲ್ಲಿ 1 ಎಕರೆ 33 ಗುಂಟೆ ಜಮೀನನ್ನು ಬಿಎಂಐಸಿಗೆ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ. ಇಲ್ಲಿ 35 ಕುಟುಂಬಗಳು ನೆಲೆಸಿವೆ. ಈ ಪೈಕಿ, 2 ಕುಟುಂಬಗಳಿಗೆ 2011ರಲ್ಲಿ ಹಕ್ಕುಪತ್ರ ವಿತರಿಸಿ ನೋಂದಣಿ ಮಾಡಲಾಗಿದೆ. 33 ಕುಟುಂಬಗಳಿಗೆ ಹಕ್ಕುಪತ್ರ ನೀಡುವುದು ಬಾಕಿ ಇದೆ. ಬಿಎಂ‌ ಕಾವಲ್ ಸರ್ವೆ ನಂಬರ್‌ 4 ರಲ್ಲಿ ಬಿಎಂಐಸಿಗೆ 34 ಎಕರೆ 3 ಗುಂಟೆ‌ ಜಮೀನು ನೀಡಲಾಗಿದೆ ಎಂದರು.

‘ಮೆಟ್ರೊ ‌ಯೋಜನೆ ಪರಿಹಾರವೂ ಕಡಿಮೆ’

‘ಬೆಂಗಳೂರು ದಕ್ಷಿಣ ತಾಲೂಕು ಯು.ಎಂ‌ ಕಾವಲ್ ಸರ್ವೆ ನಂಬರ್‌ 11 ರಲ್ಲಿ 5 ಎಕರೆ ಜಾಗವನ್ನು ಮೆಟ್ರೊ ಎರಡನೇ ಹಂತದ ಯೋಜನೆಗೆ ನೀಡಲಾಗಿದೆ. ಆದರೆ, ರೈತರಿಗೆ ಬಹಳ‌ ಕಡಿಮೆ‌ ಪರಿಹಾರ ನೀಡಿರುವುದು ಏಕೆ’ ಎಂದು ಸೋಮಶೇಖರ್‌ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಯುಎಂ‌ ಕಾವಲ್‌ನಲ್ಲಿ‌‌ ಮೊದಲು ಚದರ ಮೀಟರ್‌ಗೆ ₹ 5 ಸಾವಿರ ನೀಡಲು ಬಿಎಂಆರ್‌ಸಿಎಲ್‌ ತೀರ್ಮಾನಿಸಿತ್ತು.‌ ಇದನ್ನು‌ ರೈತರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಬಳಿಕ ಪ್ರತಿ ಚದರ ಮೀಟರ್‌ಗೆ ₹ 10 ಸಾವಿರ ನೀಡಲು ತೀರ್ಮಾನಿಸಲಾಯಿತು. ಈಗ ರೈತರು ಮತ್ತೆ ಪರಿಹಾರ ಪರಿಷ್ಕರಿಸಲು ಕೋರಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.