ADVERTISEMENT

‘ಚುನಾವಣೆ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು?’

ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಕಿಡಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 19:58 IST
Last Updated 20 ಸೆಪ್ಟೆಂಬರ್ 2019, 19:58 IST
   

ಬೆಂಗಳೂರು: ‘ಅನರ್ಹ ಶಾಸಕರ ಕ್ಷೇತ್ರಗಳಿಗೆ ಮುಂದಿನ ಡಿಸೆಂಬರ್‌ನಲ್ಲಿ ಉಪಚುನಾವಣೆ ನಡೆಯಲಿದೆ ಎಂದು ಹೇಳಲು ಸಿದ್ದರಾಮಯ್ಯ ಯಾರು’ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.

ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಶುಕ್ರವಾರ ಭೇಟಿಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಉಪಚುನಾವಣೆ ಬಗ್ಗೆ ಚುನಾವಣೆ ಆಯೋಗ ಹೇಳಬೇಕು. ಅದು ಬಿಟ್ಟು ಸಿದ್ದರಾಮಯ್ಯ ಹೇಗೆ ಹೇಳುತ್ತಾರೆ. ಅವರೇನು ಆಯೋಗದ ಏಜೆಂಟರೆ? ಎಂದು ಗುಡುಗಿದರು.

‘ನಾವು ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ್ದು, ನಮ್ಮನ್ನು ಉಚ್ಚಾಟನೆ ಮಾಡಲು ಅವರು ಯಾರು’ ಎಂದು ಪ್ರಶ್ನಿಸಿದರು. ಇನ್ನೂ ಮೂರು ವರ್ಷ ಶಾಸಕರಾಗಿ ಇರಬೇಕು ಎಂಬ ಉದ್ದೇಶದಿಂದಲೇ ಸುಪ್ರೀಂ ಕೋರ್ಟ್‌ಗೆ ಹೋಗಿದ್ದೇವೆ’ ಎಂದರು.

ADVERTISEMENT

‘ಕೋರ್ಟ್ ತೀರ್ಪಿನ ನಂತರವೇ ಚುನಾವಣೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಕೋರಿ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ. ಇದೇ 23ರಂದು ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ನಂತರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ’ ಎಂದು ಅವರು ಹೇಳಿದರು.

‘ಕಾಂಗ್ರೆಸ್‌ನಲ್ಲಿ ಪರಮೇಶ್ವರ ಬಿಟ್ಟು ರಾಜಕಾರಣ ಮಾಡಲು ಸಾಧ್ಯವಿಲ್ಲ. ‘ಪರಮೇಶ್ವರ ಅವರಿಗೆ ಸಿದ್ದರಾಮಯ್ಯ ಯಾವ ತೊಂದರೆಯನ್ನೂ ಕೊಟ್ಟಿಲ್ಲ. ಆದರೆ ಇಬ್ಬರಿಗೂ ಕೆಲವರು ತೊಂದರೆ ಮಾಡಿದ್ದಾರೆ. ಪರಮೇಶ್ವರ ಉಪಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಹಲವರು ತಪ್ಪಿಸುವ ಪ್ರಯತ್ನ ಮಾಡಿದ್ದರು. ಅದನ್ನು ಹೇಳಿಕೊಳ್ಳಲು ಅವರಿಗೆ ಧೈರ್ಯವಿಲ್ಲ. ಈ ವಿಚಾರವನ್ನು ಸೂಕ್ತ ಸಮಯದಲ್ಲಿ ನಾನೇ ಬಹಿರಂಗಪಡಿಸುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.