ಹೈಕೋರ್ಟ್ ಸಭಾಂಗಣದಲ್ಲಿ ಆಯೋಜಿಸಿದ ಏಳು ದಿನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಪುಸ್ತಕ ವೀಕ್ಷಿಸಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ದೇಶದ ಕಾನೂನಿಗೆ ಸಂಬಂಧಿಸಿದಂತೆ ಇಂಗ್ಲಿಷ್ ಭಾಷೆಯಲ್ಲಿ ‘ಭಾರತೀಯ ನ್ಯಾಯ ಶಾಸ್ತ್ರ’ ಎಂಬ ಪುಸ್ತಕ ಬರೆದಿದ್ದು, ಶೀಘ್ರ ಬೆಂಗಳೂರು ಅಥವಾ ದೆಹಲಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು.
ವಕೀಲರ ಸಂಘ ಮತ್ತು ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಶುಕ್ರವಾರ ಹೈಕೋರ್ಟ್‌ನಲ್ಲಿ ಏರ್ಪಡಿಸಿದ್ದ ಏಳು ದಿನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಮೂರು ಮಹಾಕಾವ್ಯಗಳನ್ನು ಬರೆದ ರಾಜಕಾರಣಿ ನಾನು ಒಬ್ಬನೇ ಇರಬೇಕು. ವಕೀಲಿ ವೃತ್ತಿ ಆರಂಭಿಸಿದ ಬಳಿಕ ಓದುವ ಹವ್ಯಾಸ ಶುರುವಾಯಿತು. ‘ವಿಶ್ವ ಸಂಸ್ಕೃತಿಯ ಮಹಾಯಾನ’ ಎಂಬ ಗದ್ಯಕಾವ್ಯದ ಮತ್ತೆರಡು ಸಂಪುಟಗಳು ಜನವರಿಗೆ ಬಿಡುಗಡೆಯಾಗಲಿವೆ. ಗ್ರಂಥ, ಸಾಹಿತ್ಯ, ಸಂಸ್ಕೃತಿ ವಕೀಲ ಸಮುದಾಯಕ್ಕೆ ಅತಿ ಅಗತ್ಯ. ಅದೇ ಸಂಪನ್ಮೂಲ. ಎಲ್ಲಾ ನ್ಯಾಯ ಶಾಸ್ತ್ರವನ್ನು ಋಷಿಗಳೇ ಬರೆದಿರುವುದು. ಅಧ್ಯಯನಶೀಲತೆ, ದೇಶದ ಸಂಸ್ಕೃತಿಯ ಅನುಭವ ಪಡೆದುಕೊಂಡರೆ ಮಾತ್ರ ನಿಜವಾದ ನ್ಯಾಯ ಕೊಡಲು ಸಾಧ್ಯ’ ಎಂದರು.
ಹೈಕೋರ್ಟ್ ಆವರಣದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ₹ 7 ಲಕ್ಷ ವಹಿವಾಟು ನಡೆದಿರುವುದು ಒಳ್ಳೆಯ ಬೆಳವಣಿಗೆ. ಹೆಚ್ಚು ಪುಸ್ತಕಗಳನ್ನು ಓದಿ, ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತೀಯ ವಿದ್ಯಾಭವನ ಅಧ್ಯಕ್ಷ ಕೆ.ಜಿ.ರಾಘವನ್ ಮಾತನಾಡಿ, ‘ಪೋಷಕರು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್, ಟಿ.ವಿ ನೋಡುವುದರಲ್ಲಿಯೇ ಹೆಚ್ಚು ಮಗ್ನರಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಬೆಂಗಳೂರು ನಗರದಲ್ಲಿ 15 ಸಾವಿರ ವಕೀಲರಿದ್ದಾರೆ. ತಮಗೆ ಅನುಕೂಲವಾದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿ ಪುಸ್ತಕ ಖರೀದಿಸಿದ್ದಾರೆ. ಪುಸ್ತಕ ಮೇಳ ಯಶಸ್ವಿಯಾಗಿರುವುದು ಒಳ್ಳೆಯ ಬೆಳವಣಿಗೆ‘ ಎಂದು ಹೇಳಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ವಿದ್ಯಾಭವನ ನಿರ್ದೇಶಕ ಎಚ್.ಎನ್.ಸುರೇಶ್, ಜಂಟಿ ನಿರ್ದೇಶಕಿ ನಾಗಲಕ್ಷ್ಮೀ, ಲೇಖಕ ವೈ.ಜಿ.ಮುರಳೀಧರನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.