ಬೆಂಗಳೂರು: ಸಾಹಿತ್ಯಕ್ಕೆ ಭಾಷೆಯ ಗಡಿಗಳು ಇರಬಹುದು. ಸಿದ್ದಾಂತಗಳು ಕೂಡ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಸಾಹಿತ್ಯದಲ್ಲಿ ಮನುಷ್ಯತ್ವವೇ ಇಲ್ಲದೇ ಇದ್ದರೆ ಅಂತಹ ಬರಹಕ್ಕೆ ಮಹತ್ವವೇ ಇರುವುದಿಲ್ಲ ಎಂದು ಸಾಹಿತಿ ಜಯಂತಿ ಕಾಯ್ಕಿಣಿ ಹೇಳಿದರು.
ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬುಕ್ ಬ್ರಹ್ಮ ಸಾಹಿತ್ಯ ಸಂಗಮದ ಎರಡನೇ ಗೋಷ್ಠಿಯಲ್ಲಿ ದಕ್ಷಿಣ ಭಾರತದ ಸಾಹಿತ್ಯದಲ್ಲಿ ಬಹು ಭಾಷಾ ಸಂವೇದನೆ ಎನ್ನುವ ಕುರಿತು ಮಾತನಾಡಿದರು.
ಯಾವುದೇ ಬರವಣಿಗೆಗೆ ಅನುಭವ ಎನ್ನುವುದು ಮುಖ್ಯ. ಅನುಭವ ಇಲ್ಲದೇ ಇದ್ದರೆ ಅದು ಸಾಹಿತ್ಯ ಆಗಲಾರದು. ಅಂತಹ ಅನುಭವ ವಿಭಿನ್ನ ರೂಪದಲ್ಲಿ ಲೇಖಕನಿಗೆ ಬರುತ್ತದೆ. ಸಾಹಿತ್ಯದಲ್ಲಿ ಸಿದ್ದಾಂತ ಒಂದು ಕಡೆಯಿದ್ದರೂ, ಮನುಷ್ಯತ್ವ, ಪ್ರೀತಿ ಇಲ್ಲದೇ ಇದ್ದರೆ ಅದು ಗಟ್ಟಿ ಸಾಹಿತ್ಯವಾಗಲಾರದು. ಇದು ಭಾಷೆಯ ಗಡಿಯನ್ನು ಮೀರಿ ಜನರನ್ನು ತಲುಪುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಾಹಿತಿ ಕಾರ್ಲೋಸ್ ತಮಿಳವನ್, ‘ಕೆಲವು ಕಡೆ ಭಾಷೆಗೆ ಪೂರಕವಾಗಿ ನಡೆದ ಚಳವಳಿಗಳು ಸಾಹಿತ್ಯದ ಮೇಲೆ ಪರಿಣಾಮ ಬೀರಿದವು. ಇದನ್ನು ದಕ್ಷಿಣ ಭಾರತದ ಭಾಷೆಗಳಲ್ಲಿ ಕಾಣಬಹುದು. ಕೆಲವೊಮ್ಮೆ ಇಂತಹ ಪ್ರಯತ್ನಗಳು ಭಾಷೆಗಳ ಮೇಲೆ ಸಂಘರ್ಷಕ್ಕೂ ದಾರಿ ಮಾಡಿಕೊಡಬಹುದು’ ಎಂದು ಕಮಲ್ ಹಾಸನ್ ಅವರ ಇತ್ತೀಚಿನ ಹೇಳಿಕೆಯನ್ನು ಪ್ರಸ್ತಾಪಿಸಿದರು. ಆದರೆ ಈ ಕುರಿತು ಹೆಚ್ಚಿನ ಚರ್ಚೆಗೆ ಅವಕಾಶ ಸಿಗಲಿಲ್ಲ.
ತೆಲುಗು ಲೇಖಕಿ ಸಿ.ಮೃಣಾಲಿನಿ ಅವರು ಹನ್ನೆರಡನೇ ಶತಮಾನದಲ್ಲಿ ನಡೆದ ಬಸವಣ್ಣನವರ ಕಲ್ಯಾಣ ಕ್ರಾಂತಿಯ ಸನ್ನಿವೇಶ, ಆಗ ರೂಪುಗೊಂಡು ವಚನ ಸಾಹಿತ್ಯ, ಅದರ ಪರಿಣಾಮದ ಕುರಿತು ಬೆಳಕು ಚೆಲ್ಲಿದರು. ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೇರೆ ಬೇರೆ ಕಾರಣಕ್ಕೆ ಸಾಹಿತ್ಯ ಬೆಳೆದಿದೆ. ಆದರೆ ಕರ್ನಾಟಕದಲ್ಲಿ ಆದ ವಚನ ಕ್ರಾಂತಿ ಮಹತ್ವವಾದದು. ತೆಲುಗಿನಲ್ಲೂ ಬಸವಪುರಾಣ ಎನ್ನುವ ಕೃತಿಗಳನ್ನು ಕನ್ನಡದಿಂದಲೇ ಅನುವಾದಿಸಲಾಯಿತು, ಬಸವಣ್ಣನವರ ಜೀವನಗಾಥೆಗಳು ತೆಲುಗಿನಲ್ಲೂ ಸಾಹಿತ್ಯ ರೂಪ ಪಡೆದವು ಎಂದು ಹೇಳಿದರು.
ಮಲೆಯಾಳ ಲೇಖಕಿ ಕೆ.ಆರ್.ಮೀರಾ, ಬಿ.ಜಯಮೋಹನ್ ಮಾತನಾಡಿದರು. ಸುಚಿತ್ರಾ ರಾಮಚಂದ್ರನ್ ಗೋಷ್ಠಿ ನಿರ್ವಹಿಸಿದರು.
ಯಾವುದೇ ಬರವಣಿಗೆಗೆ ಅನುಭವ ಎನ್ನುವುದು ಮುಖ್ಯ. ಅನುಭವ ಇಲ್ಲದೇ ಇದ್ದರೆ ಅದು ಸಾಹಿತ್ಯ ಆಗಲಾರದು.ಜಯಂತ್ ಕಾಯ್ಕಿಣಿ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.