ನೃಪತುಂಗ ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಡಾ. ಎಂ.ಸಿ. ಸುಧಾಕರ್, ನೃಪತುಂಗ ವಿ.ವಿ ಕುಲಪತಿ ಪ್ರೊ. ಫಜೀಹಾ ಸುಲ್ತಾನ, ಕುಲಸಚಿವೆ ಪ್ರೊ.ಎ.ಸಿ. ಮಂಜುಳಾ, ಇಲಾಖೆ ಪ್ರಧಾನ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌಧರಿ ಭಾಗವಹಿಸಿದ್ದರು
ಪ್ರಜಾವಾಣಿ ಚಿತ್ರ.
ಬೆಂಗಳೂರು: ವಿಜ್ಞಾನ ವಿಷಯ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ವಿಜ್ಞಾನ ಓದಿದವರೇ ಮೂಢನಂಬಿಕೆ, ಕಂದಾಚಾರಕ್ಕೆ ಗಂಟು ಬೀಳುತ್ತಿದ್ದಾರೆ. ಚಲನೆ ಇಲ್ಲದ ಜಾತಿ ತಾರತಮ್ಯವನ್ನು ಗಟ್ಟಿಗೊಳಿಸುವ ಸಲುವಾಗಿಯೇ ಪಟ್ಟಭದ್ರರು ಮೌಢ್ಯವನ್ನು ಬಿತ್ತುತ್ತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನೃಪತುಂಗ ವಿಶ್ವವಿದ್ಯಾಲಯದಲ್ಲಿ ₹52 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಏಳು ಅಂತಸ್ತಿನ ನೂತನ ಶೈಕ್ಷಣಿಕ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಶತಮಾನಗಳ ಹಿಂದೆಯೇ ಬಸವಾದಿ ಶರಣರು ಮೌಢ್ಯ, ಕಂದಾಚಾರಗಳ ವಿರುದ್ಧ ಹೋರಾಟ ಮಾಡಿದ್ದರು. ಆದರೆ, ಇಂದಿಗೂ ಮೌಢ್ಯವಿದೆ. ವಿದ್ಯೆ, ಪ್ರತಿಭೆ ಯಾವುದೇ ಒಂದು ಜಾತಿಯ ಸ್ವತ್ತಲ್ಲ. ಅವಕಾಶ ಸಿಗಬೇಕು. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡರೆ ಸಮಾಜದ ಪ್ರಗತಿ ಸಾಧ್ಯ. ವಿಜ್ಞಾನದ ವಿದ್ಯಾರ್ಥಿಗಳು ವೈಚಾರಿಕತೆ ಅಳವಡಿಸಿಕೊಂಡು ಸಮಾಜ ವನ್ನು ಮುನ್ನಡೆಸಬೇಕು ಎಂದರು.
ಹೊಸ ಕಟ್ಟಡದ ಆರನೇ ಮತ್ತು ಏಳನೇ ಮಹಡಿಗಳನ್ನು ಪೂರ್ಣಗೊಳಿಸಲು ₹8 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಫಜೀಹಾ ಸುಲ್ತಾನ, ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌಧರಿ, ಆಡಳಿತ ಮತ್ತು ಮೌಲ್ಯಮಾಪನ ಕುಲಸಚಿವೆ ಪ್ರೊ.ಎ.ಸಿ.ಮಂಜುಳಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.