ADVERTISEMENT

ಸ್ಪೇಸ್‌ ಇಂಡಿಯಾ ₹10 ಸಾವಿರ ಕೋಟಿ ಹೂಡಿಕೆ

ಉಪಗ್ರಹ ನಿರ್ಮಾಣ, ಕಾರ್ಯಾಚರಣೆ, ನಿರ್ವಹಣಾ ಚಟುವಟಿಕೆಗಳಿಗಾಗಿ ಬಳಕೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 21:54 IST
Last Updated 12 ಮಾರ್ಚ್ 2021, 21:54 IST
ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಿ. ರಾಧಾಕೃಷ್ಣ ಹಾಗೂ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ. ನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಿ. ರಾಧಾಕೃಷ್ಣ ಹಾಗೂ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ. ನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಬೆಂಗಳೂರು: ಇಸ್ರೊದ ವಾಣಿಜ್ಯ ಅಂಗ ಸಂಸ್ಥೆಯಾದ ‘ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌’ (ಎನ್‌ಎಸ್‌ಐಆಲ್‌) ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ಬಾಹ್ಯಾಕಾಶ ಸಂಬಂಧಿತ ಉಡಾವಣೆ, ಕಾರ್ಯಾಚರಣೆ, ನಿರ್ವಹಣೆ ಮತ್ತು ಸೇವಾ ಚಟುವಟಿಕೆಗಳಿಗಾಗಿ ಮುಂದಿನ ಐದು ವರ್ಷಗಳಲ್ಲಿ ₹10,000 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ.

ಮುಂದಿನ ವರ್ಷದಿಂದ ಐದು ವರ್ಷಗಳವರೆಗೆ ತಲಾ ₹2,000 ಕೋಟಿ ಹೂಡಿಕೆ ಮಾಡಲಾಗುವುದು. ಇದಕ್ಕಾಗಿ ಷೇರು ಮಾರುಕಟ್ಟೆಯ ಮೂಲಕ ಹಣ ಸಂಗ್ರಹಿಸುವ ಉದ್ದೇಶವಿದೆ ಎಂದು ಎನ್‌ಎಸ್‌ಐಆಲ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ.ನಾರಾಯಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಂತರ ರಾಷ್ಟ್ರೀಯ ಉಪಗ್ರಹಗಳ ಉಡಾವಣೆಗೆ ಬೇಡಿಕೆ ಹೆಚ್ಚುತ್ತಿದ್ದು, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ತೂಕದ(1000 ಕೆ.ಜಿ ಒಳಗಿನದು) ಉಪಗ್ರಹಗಳ ಉಡಾವಣೆಗೆ ಭಾರತವೇ ನೆಚ್ಚಿನ ತಾಣವಾಗಿದೆ. ಇತರ ದೇಶಗಳ ಬಾಹ್ಯಾಕಾಶ ಸಂಸ್ಥೆಗಳಿಗೆ ಹೋಲಿಸಿದರೆ ವೆಚ್ಚ ಅತಿ ಕಡಿಮೆ ಗುಣಮಟ್ಟ ಅತ್ಯುತ್ತಮವಾದುದು’ ಎಂದು ಹೇಳಿದರು.

ADVERTISEMENT

2 ವರ್ಷಗಳಲ್ಲಿ 4 ಅಂತರ ರಾಷ್ಟ್ರೀಯ ಉಡಾವಣೆ: ಮುಂಬರುವ ಎರಡು ವರ್ಷಗಳಲ್ಲಿ ಎನ್‌ಎಸ್‌ಐಆಲ್‌ ನಾಲ್ಕು ಮಹತ್ವದ ಪಿಎಸ್‌ಎಲ್‌ವಿ ಉಡಾವಣಾ ಸೇವೆಯ ಜವಾಬ್ದಾರಿ ಹೊತ್ತಿದೆ. 2022ರಲ್ಲಿ ಎರಡು ನಿರ್ದಿಷ್ಟ ಉದ್ದೇಶದ ಉಪಗ್ರಹಗಳ ಉಡಾವಣೆ ನಡೆಯಲಿದ್ದು, ಅವು ಯಾವ ದೇಶದ ಉಪಗ್ರಹಗಳು ಎಂಬುದನ್ನು ಬಹಿರಂಗಗೊಳಿಸಲು ನಾರಾಯಣನ್‌ ಒಪ್ಪಲಿಲ್ಲ.

ಹೊಸ ಬಾಹ್ಯಾಕಾಶ ನೀತಿಯು ದೇಶದ ಬಾಹ್ಯಾಕಾಶ ವಿಜ್ಞಾನವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲಿದೆ. ಈ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗುವುದರ ಜತೆಗೆ ವಿಶ್ವದಲ್ಲಿ ಬಾಹ್ಯಾಕಾಶ ಸೇವೆಯ ಪ್ರಮುಖ ದೇಶವಾಗಿ ಹೊರ ಹೊಮ್ಮಲಿದೆ. ಮುಖ್ಯವಾಗಿ, ಉಡಾವಣೆಯ ಸೇವೆಯ ಜತೆಗೆ ಬೇಡಿಕೆ ಆಧರಿಸಿ ಬಾಹ್ಯಾಕಾಶ ಸೇವೆಗಳನ್ನು ಒದಗಿಸಲಿದ್ದೇವೆ. ಸದ್ಯಕ್ಕೆ ಪೂರೈಕೆ ಆಧಾರಿತ ಸೇವೆ ನೀಡಲಾಗುತ್ತಿದೆ. ಹೊಸ ನೀತಿಗೆ ಅನುಗುಣವಾಗಿ ಪರಿವರ್ತನೆ ತರಲು ಹಲವು ಬಳಕೆದಾರರ ಜತೆ ಸಮಾಲೋಚನೆ ನಡೆಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಎನ್‌ಎಸ್‌ಐಎಲ್‌ ಮೂಲಕವೇ ಉಪಗ್ರಹಗಳ ನಿರ್ಮಾಣ ಮತ್ತು ಉಡಾವಣೆಗೆ ಸಂಬಂಧಿಸಿದಂತೆ ಬಳಕೆದಾರರ ಜತೆ ಒಪ್ಪಂದವನ್ನೂ ಮಾಡಿಕೊಳ್ಳಲಾಗುವುದು. ಆರಂಭದಲ್ಲಿ ದೂರಸಂಪರ್ಕ ವಲಯದ ಗ್ರಾಹಕರಿಗೆ ಸೇವೆ ಒದಗಿಸಲಾಗುವುದು ಎಂದು ವಿವರಿಸಿದರು.

ಹೊಸ ಬಾಹ್ಯಾಕಾಶ ಸುಧಾರಣಾ ನೀತಿಯ ಭಾಗವಾಗಿ ಇತರ ದೇಶಗಳು ಉಪಗ್ರಹ ನಿರ್ಮಾಣದ ಬೇಡಿಕೆಯನ್ನು ಮುಂದಿಟ್ಟರೆ, ಉಪಗ್ರಹಗಳನ್ನೂ ನಿರ್ಮಿಸಿಕೊಡಲಿದ್ದೇವೆ. ಹೆಚ್ಚಿನ ದೇಶಗಳಿಂದ ಉಪಗ್ರಹ ನಿರ್ಮಾಣಕ್ಕಾಗಿ ಹೆಚ್ಚಿನ ಬೇಡಿಕೆ ಸಿಗಲಿದೆ ಎಂಬ ವಿಶ್ವಾಸವಿದೆ. ಆದರೆ, ಅದಕ್ಕೂ ಮೊದಲು ದೇಶೀ ಮಾರುಕಟ್ಟೆಯಲ್ಲಿ ಪೂರೈಕೆ ಆಧಾರಿತ ಸೇವೆಯನ್ನು ಕೈಬಿಟ್ಟು ಬೇಡಿಕೆ ಆಧಾರಿತ ಸೇವೆಗೆ ಹೊರಳಲು ಎನ್‌ಎಸ್‌ಐಎಲ್‌ ತನ್ನ ಗಮನ ಕೇಂದ್ರೀಕರಿಸಲಿದೆ ಎಂದು ನಾರಾಯಣನ್‌ ತಿಳಿಸಿದರು.

ಶೇ 30 ರಷ್ಟು ಬೆಳವಣಿಗೆ
‘ಎನ್‌ಎಸ್‌ಐಎಲ್‌ ಮೊದಲ ವರ್ಷ ₹300 ಕೋಟಿ ಆದಾಯ ಗಳಿಸಿತ್ತು. 2020–21 ನೇ ಸಾಲಿನಲ್ಲಿ ₹400 ಕೋಟಿ ಆದಾಯ ಗಳಿಸಿದೆ. ಶೇ 30 ರಷ್ಟು ಬೆಳವಣಿಗೆ ಇದೆ. ಮುಂದಿನ ದಿನಗಳಲ್ಲಿ ಇಸ್ರೊ ಉಪಗ್ರಹಗಳ ಸೇವೆಯನ್ನು ನಾವೇ ನಿರ್ವಹಿಸುವುದಕ್ಕೆ ಅಗತ್ಯ ತಯಾರಿ ನಡೆಸಿದ್ದೇವೆ. ಈ ಸಂಬಂಧ ಇಸ್ರೊ ಜತೆ ಮಾತುಕತೆಗಳು ನಡೆದಿವೆ’ ಎಂದು ನಾರಾಯಣನ್‌ ತಿಳಿಸಿದರು.

ಇಲ್ಲಿಯವರೆಗೆ 342 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಇದರಲ್ಲಿ ಶೇ 75 ರಿಂದ ಶೇ 80 ರಷ್ಟು ಉಪಗ್ರಹಗಳು ಅಮೆರಿಕದ್ದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.