ADVERTISEMENT

‘ವಿಶೇಷ ಜಿಲ್ಲಾಧಿಕಾರಿಯಿಂದ ವಸ್ತುನಿಷ್ಠವಲ್ಲದ ಆದೇಶ’

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 20:01 IST
Last Updated 27 ಸೆಪ್ಟೆಂಬರ್ 2020, 20:01 IST

ಬೆಂಗಳೂರು: ‘ಯಲಹಂಕ ತಾಲ್ಲೂಕಿನ ಶೆಟ್ಟಿಗೆರೆಯ ಸರ್ವೆ ನಂಬರ್‌ 79 ರಲ್ಲಿ 17 ಎಕರೆ 35 ಗುಂಟೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ವಿಶೇಷ ಜಿಲ್ಲಾಧಿಕಾರಿ ಎಂ.ಕೆ ಜಗದೀಶ್‌ ವಸ್ತುನಿಷ್ಠವಲ್ಲದ ಆದೇಶ ಹೊರಡಿಸಿದ್ದಾರೆ’ ಎಂದು ಯಲಹಂಕ ತಹಶೀಲ್ದಾರ್‌ ಎನ್. ರಘುಮೂರ್ತಿ ಆರೋಪಿಸಿದ್ದಾರೆ.

‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾಗಿರುವ ವಿಶೇಷ ವರದಿಗೆ ಪ್ರತಿಕ್ರಿಯಿಸಿರುವ ರಘುಮೂರ್ತಿ, ‘ನಾನಿಲ್ಲಿ ತಹಶೀಲ್ದಾರ್‌ ಆಗಿರುವುದು 2019ರಲ್ಲಿ. ಅದಕ್ಕೂ ಮುನ್ನವೇ ಸಾರ್ವಜನಿಕರಿಗೆ ಈ ಸರ್ವೆ ನಂಬರ್‌ನ ಭೂಮಂಜೂರಾತಿ ದಾಖಲೆ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಜಮೀನಿನ ಮಂಜೂರಾತಿ ನೈಜತೆಯನ್ನು ಪರಿಶೀಲಿಸುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೋರಿತ್ತು. ಈ ಸರ್ವೆ ನಂಬರ್‌ನಲ್ಲಿ ಐವರು ಮಂಜೂರುದಾರರಿಗೆ 17 ಎಕರೆ 35 ಗುಂಟೆ ಜಮೀನು ಖಾತೆ ದಾಖಲು ಮಾಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೆ. ನ್ಯಾಯಾಲಯದ ಆದೇಶದ ಪ್ರಕಾರ ಖಾತೆ ದಾಖಲು ಮಾಡುವಂತೆ ಜಿಲ್ಲಾಧಿಕಾರಿಯವರೇ ಖುದ್ದು ಆದೇಶ ನೀಡಿದ್ದರು. ಆದರೂ, 1978–79 ರಲ್ಲಿ ನಡೆದ ಈ ಭೂಮಂಜೂರಾತಿ ದಾಖಲೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ವಿಶೇಷ ಜಿಲ್ಲಾಧಿಕಾರಿಗೂ 2020ರ ಜ 22ರಂದು ಪತ್ರ ಬರೆದಿದ್ದೆ. ಅವರು ನನ್ನಿಂದ ವಿವರಣೆ ಕೇಳದೆ ಆದೇಶ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.