ADVERTISEMENT

ವಿಶೇಷ ವರದಿ | ‘ಡಯಾಬಿಟಿಸ್ ರೆಮಿಷನ್’ಗಿಲ್ಲ ಮಾರ್ಗಸೂಚಿ

ಮಧುಮೇಹಿಗಳ ದಿಕ್ಕು ತಪ್ಪಿಸುವ ಬಗ್ಗೆ ವೈದ್ಯಕೀಯ ತಜ್ಞರು ಕಳವಳ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 16:37 IST
Last Updated 27 ಅಕ್ಟೋಬರ್ 2023, 16:37 IST
ಡಾ. ಸಂಜಯ್ ಕುಮಾರ್
ಡಾ. ಸಂಜಯ್ ಕುಮಾರ್   

ಬೆಂಗಳೂರು: ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾದ ‘ಡಯಾಬಿಟಿಸ್ ರೆಮಿಷನ್’ ಪರಿಕಲ್ಪನೆ ರಾಜ್ಯದಲ್ಲಿ ಇತ್ತೀಚೆಗೆ ‘ಡಯಾಬಿಟಿಸ್ ರಿವರ್ಸಲ್’ ಹೆಸರಿನಲ್ಲಿ ಮುನ್ನಲೆಗೆ ಬಂದಿದೆ. ಆದರೆ, ಇದಕ್ಕೆ ಸೂಕ್ತ ಮಾರ್ಗಸೂಚಿ ಇಲ್ಲದಿರುವುದು ಚಿಕಿತ್ಸೆಗೆ ತೊಡಕಾಗಿದೆ. 

ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿಯಿಂದ ಮಧುಮೇಹಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ ಆರೋಗ್ಯ ಇಲಾಖೆಯು ರಾಷ್ಟ್ರೀಯ ಮಧುಮೇಹ ನಿಯಂತ್ರಣ ಕಾರ್ಯಕ್ರಮದಡಿ 30 ವರ್ಷ ಮೇಲ್ಪಟ್ಟ ಎಲ್ಲ ವಯಸ್ಕರಿಗೂ ಎನ್‌ಸಿಡಿ ಕ್ಲಿನಿಕ್‌ಗಳಲ್ಲಿ (ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌) ತಪಾಸಣೆ ನಡೆಸುತ್ತಿದೆ. ರಾಜ್ಯದಲ್ಲಿ ಜಿಲ್ಲಾ ಹಂತದ 30 ಎನ್‌ಸಿಡಿ ಕ್ಲಿನಿಕ್‌ಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ 347 ಸಿ.ಎಚ್‌.ಸಿ–ಎನ್‌.ಸಿ.ಡಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ತಪಾಸಣೆ ಯಲ್ಲಿ ಪ್ರತಿವರ್ಷ 90 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಹೊಸದಾಗಿ ಮಧುಮೇಹ ಪತ್ತೆಯಾಗುತ್ತಿದೆ. ಈ ರೋಗವನ್ನು ಪಥ್ಯದ ಮೂಲಕ ನಿಯಂತ್ರಿಸುವ ವಿಧಾನಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೂಕ್ತ ಮಾರ್ಗಸೂಚಿ ರೂಪಿಸಿಲ್ಲ. 

‘ಡಯಾಬಿಟಿಸ್ ರೆಮಿಷನ್’ ವಿಧಾನದ ಬಗ್ಗೆ ಐಸಿಎಂಆರ್ 18 ಸಾವಿರ ವಯಸ್ಕ ಮಧುಮೇಹಿಗಳ ಮೇಲೆ ಸಂಶೋಧನೆ ನಡೆಸಿತ್ತು. ಈ ವಿಧಾನದಿಂದ ಮಧುಮೇಹಕ್ಕೆ ಕಾರಣವಾದ ಕಾರ್ಬೋಹೈಡ್ರೇಟ್ ಅಂಶವನ್ನು ಶೇ 54ಕ್ಕೆ ಇಳಿಸಿತ್ತು. ಇದೇ ವೇಳೆ ಪ್ರೊಟೀನ್‌ ಪ್ರಮಾಣವನ್ನು ಶೇ 20ಕ್ಕೆ ಹೆಚ್ಚಿಸಿತ್ತು. ಇದರಿಂದ ಮಧುಮೇಹ ನಿಯಂತ್ರಣ ಸಾಧ್ಯವಾಗಿತ್ತು. ಮಧುಮೇಹ ನಿಯಂತ್ರಣದ ಬಗ್ಗೆ ವಿವಿಧ ಖಾಸಗಿ ಸಂಸ್ಥೆಗಳೂ ಅಧ್ಯಯನ ನಡೆಸಿವೆ. ಆದರೆ, ನಿರ್ದಿಷ್ಟ ವಿಧಾನವನ್ನು ರೂಪಿಸಿಲ್ಲ. ಟೈಪ್ 2 ಮಧುಮೇಹದ ನಿರ್ವಹಣೆ ಬಗ್ಗೆ ಮಾರ್ಗಸೂಚಿ ರೂಪಿಸಿರುವ ಐಸಿಎಂಆರ್, ಪಥ್ಯದ ಮೂಲಕ ನಿಯಂತ್ರಣ ವಿಧಾನಕ್ಕೆ ನಿರ್ದಿಷ್ಟ ಮಾರ್ಗಸೂಚಿ ನೀಡಿಲ್ಲ. ಇದರಿಂದಾಗಿ ಈ ವಿಧಾನದ ದುರ್ಬಳಕೆ ಬಗ್ಗೆ ಮಧುಮೇಹ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 

ADVERTISEMENT

ಮಾರ್ಗಸೂಚಿ ಅಗತ್ಯ: ಆಹಾರ ಪಥ್ಯದ ಮೂಲಕ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸುವ ವಿಧಾನದ ಕುರಿತು ಪೂರ್ಣ ಪ್ರಮಾಣದ ಸಂಶೋಧನೆ ನಡೆಸಿ, ನಿರ್ದಿಷ್ಟ ಮಾರ್ಗಸೂಚಿ ರೂಪಿಸುವ ಬಗ್ಗೆಯೂ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಮಧುಮೇಹ ತಜ್ಞರೂ ಆಗಿರುವ ಡಾ. ವಾಸು ಎಚ್.ವಿ. ಅವರು ಐಸಿಎಂಆರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿದ್ದಾರೆ. 

‘ಮಧುಮೇಹವನ್ನು ನಿಯಂತ್ರಿಸಬಹುದೇ ಹೊರತು ನಿವಾರಿಸಲು ಸಾಧ್ಯವಿಲ್ಲ. ಆಹಾರ ಪಥ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಮಧುಮೇಹ ನಿಯಂತ್ರಣ ಸಾಧ್ಯವೆನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಾದರೆ ಮತ್ತೆ ಮಧುಮೇಹ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಾರ್ಗಸೂಚಿ ಅತ್ಯಗತ್ಯ. ಇಲ್ಲವಾದಲ್ಲಿ ಈ ವಿಧಾನವನ್ನು ಕೆಲ ಕೇಂದ್ರಗಳು ದುರ್ಬಳಕೆ ಮಾಡಿಕೊಂಡು, ಮಧುಮೇಹಿಗಳ ದಿಕ್ಕು ತಪ್ಪಿಸುವ ಸಾಧ್ಯತೆಯಿದೆ’ ಎಂದು ಮಧುಮೇದಹ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 

ಡಯಾಬಿಟಿಸ್ ರೆಮಿಷನ್ ಎನ್ನುವುದು ಇತ್ತೀಚೆಗೆ ಉದ್ಯಮ ಆಗಿದೆ. ವ್ಯಾಯಾಮ ಪಥ್ಯದಿಂದ ಮಧುಮೇಹವನ್ನು ಹತೋಟಿಗೆ ತಂದು ಮಾತ್ರೆಗಳನ್ನು ಕಡಿಮೆ ಮಾಡಬಹುದು.
–ಡಾ. ಅನಿಲ್ ಕುಮಾರ್ ಆರ್. ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ ಹೊರರೋಗಿ ವಿಭಾಗದ ಮುಖ್ಯಸ್ಥ
ಮಧುಮೇಹವನ್ನು ಮಾತ್ರೆ ಇಲ್ಲದೆ ನಿರ್ವಹಿಸಿ ನಿಯಂತ್ರಿಸಬಹುದು. ಇದಕ್ಕೆ ಸೂಕ್ತ ಮಾರ್ಗಸೂಚಿ ಇಲ್ಲದಿದ್ದರೆ ಬಿಸಿನೆಸ್ ಆಗುವ ಸಾಧ್ಯತೆ ಇರುತ್ತದೆ. ವಿದೇಶದಲ್ಲಿ ಮಾರ್ಗಸೂಚಿಯಿದೆ.
ಡಾ. ವಾಸು ಎಚ್.ವಿ. ಆ್ಯಕ್ಟಿವ್ ಹೆಲ್ತ್ ಡಯಾಬಿಟಿಸ್ ಸೆಂಟರ್ ಮುಖ್ಯಸ್ಥ

‘ಅಲ್ಪಾವಧಿಯಲ್ಲಿ ನಿಯಂತ್ರಣ ಅಸಾಧ್ಯ

  ‘ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಆಹಾರ ಪಥ್ಯ ವ್ಯಾಯಾಮದಿಂದ ನಿಯಂತ್ರಿಸಬಹುದು. ‘ಡಯಾಬಿಟಿಸ್ ರೆಮಿಷನ್’ ವಿಧಾನಕ್ಕೆ ಒಳಗಾದವರಿಗೆ ಹಂತ ಹಂತವಾಗಿ ಔಷಧದ ಪ್ರಮಾಣವನ್ನು ಕಡಿತ ಮಾಡಲಾಗುತ್ತದೆ. ಆಹಾರ ಪಥ್ಯ ಪಾಲನೆ ಹಾಗೂ ದೈಹಿಕ ಚಟುವಟಿಕೆ ಬಿಟ್ಟರೆ ಮತ್ತೆ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಶಾಶ್ವತವಾಗಿ ಮಧುಮೇಹ ನಿಯಂತ್ರಣದ ಸದ್ಯದ ಮಟ್ಟಿಗೆ ಸಾಧ್ಯವಿಲ್ಲ’ ಎಂದು ಬೆಳಗಾವಿಯ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ತಜ್ಞ ಡಾ. ಸಂಜಯ್ ಕಂಬಾರ್ ತಿಳಿಸಿದರು.  ‘ಮಧುಮೇಹ ಯಾವುದೇ ಹಂತದಲ್ಲಿ ಇದ್ದರೂ ನಿಯಂತ್ರಣ ಸಾಧ್ಯ. ಪ್ರತಿವರ್ಷ ಮಧುಮೇಹ ಪರೀಕ್ಷೆಗೆ ಒಳಪಟ್ಟರೆ ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ ಆಹಾರ ಪಥ್ಯಕ್ಕೆ ಸೂಕ್ತ ಸಲಹೆಗಳನ್ನು ನೀಡಬಹುಹುದು. ಇದರ ನಿಯಂತ್ರಣಕ್ಕೆ ಕನಿಷ್ಠ ಮೂರು ತಿಂಗಳಾದರೂ ಬೇಕಾಗುತ್ತದೆ. ಕೆಲವರಿಗೆ ಒಂದು ವರ್ಷವೂ ಹಿಡಿಯುತ್ತದೆ’ ಎಂದು ಹೇಳಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.