ADVERTISEMENT

ಗುರು ರಾಘವೇಂದ್ರ ಬ್ಯಾಂಕ್‌: ₹1,792 ಕೋಟಿ ಅಕ್ರಮ, ಅಧ್ಯಕ್ಷ ರಾಮಕೃಷ್ಣ ಬಂಧನ

ತನಿಖೆಯಲ್ಲಿ ಅಕ್ರಮ ಬಯಲು– ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 20:46 IST
Last Updated 15 ಫೆಬ್ರುವರಿ 2022, 20:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ₹ 1,792 ಕೋಟಿ ಮೊತ್ತದ ಅಕ್ರಮ ನಡೆದಿರುವುದು ಈವರೆಗಿನ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌
ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಸದಸ್ಯರು ಮತ್ತು ಇತರ ಠೇವಣಿದಾರರು ಸೇರಿದಂತೆ 41,778 ಮಂದಿಗೆ ವಂಚನೆಯಾಗಿದೆ. ವಿಮಾ ಸಂಸ್ಥೆಯ ಮೂಲಕ ಈವರೆಗೆ ₹ 709.99 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.

ಬ್ಯಾಂಕ್‌ನ ಸಂಪೂರ್ಣ ಉಸ್ತುವಾರಿಯನ್ನು ಹೈಕೋರ್ಟ್‌ ನಿರ್ದೇಶನದ ಅನುಸಾರ ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಡಿಕೊಳ್ಳುತ್ತಿದೆ. ಅವರಿಂದಲೇ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಬ್ಯಾಂಕ್‌ನ 26 ನಿರ್ದೇಶಕರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಸಹಕಾರ ಇಲಾಖೆಯಿಂದಲೂ ಸಹಕಾರ ಕಾಯ್ದೆಯ ಸೆಕ್ಷನ್‌ 64ರ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ADVERTISEMENT

ಈ ಬ್ಯಾಂಕ್‌ನ ಪುನಶ್ಚೇತನ ಮತ್ತು ನಷ್ಟ ವಸೂಲಿ ಸಂಬಂಧ ಪ್ರತಿ 15 ದಿನಗಳಿಗೊಮ್ಮೆ ಉನ್ನತಮಟ್ಟದ ಸಭೆ ನಡೆಸಲಾಗುತ್ತಿದೆ. 2014–15ರಿಂದ 2018–19ರ ಅವಧಿಯವರೆಗೆ ಮರು ಲೆಕ್ಕ ಪರಿಶೋಧನೆ ನಡೆಸಲಾಗಿದೆ. ಉಳಿದ ಅವಧಿಯ ಮರು ಲೆಕ್ಕ ಪರಿಶೋಧನೆ ನಡೆಯುತ್ತಿದೆ. ಫೆಬ್ರುವರಿ ಅಂತ್ಯದಲ್ಲಿ ವರ್ಚುವಲ್‌ ವಿಧಾನದಲ್ಲಿ ಷೇರುದಾರರು ಮತ್ತು ಹೂಡಿಕೆದಾರರ ಸಭೆ ನಡೆಸಿ, ಸದ್ಯದ ಸ್ಥಿತಿಗತಿ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಆಡಳಿತಾಧಿಕಾರಿಗೆ ಸೂಚಿಸಲಾಗಿದೆ
ಎಂದರು.

ವಿಲೀನಕ್ಕೆ ಆಗ್ರಹ: ‘ಮತ್ತಷ್ಟು ನಷ್ಟ ಉಂಟಾಗುವುದನ್ನು ತಪ್ಪಿಸಲು ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ ಅನ್ನು ಇತರ ಸಹಕಾರ ಬ್ಯಾಂಕ್‌ ಜತೆಗೆ ವಿಲೀನ ಮಾಡಬೇಕು’ ಎಂದು ವೆಂಕಟೇಶ್‌ ಆಗ್ರಹಿಸಿದರು.

‘ವಿಷಯ ಹೈಕೋರ್ಟ್‌ ಮತ್ತು ಆರ್‌ಬಿಐ ಸುಪರ್ದಿಯಲ್ಲಿ ಇರುವುದರಿಂದ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ’ ಎಂದು ಸೋಮಶೇಖರ್‌ ತಿಳಿಸಿದರು.

‘ವಸಿಷ್ಠ ಕ್ರೆಡಿಟ್‌ ಸೌಹಾರ್ದ ಸಹಕಾರಿಯಲ್ಲಿ ₹ 295 ಕೋಟಿ ಅಕ್ರಮ ಪತ್ತೆಯಾಗಿದೆ. ಸಾಲ ವಸೂಲಿ ಮಾಡಿ ಠೇವಣಿದಾರರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕ್ಷ ರಾಮಕೃಷ್ಣ ಬಂಧನ

ಬೆಂಗಳೂರು:₹ 1,554 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ನಗರದ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ರಾಮಕೃಷ್ಣ ಅವರನ್ನು ಬಂಧಿಸಲಾಗಿದ್ದು, ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ಸೆಷನ್ಸ್ ನ್ಯಾಯಾಧೀಶರ ಕೋರ್ಟ್ ಮುಂದೆ ಮಂಗಳವಾರ ಹಾಜರುಪಡಿಸಲಾಯಿತು.

72 ವರ್ಷದ ಕೆ.ರಾಮಕೃಷ್ಣ ಅವರನ್ನು ಸೋಮವಾರವಷ್ಟೇ ಸಂಜೆ 6.50ಕ್ಕೆ ನಗರದಲ್ಲಿ ಬಂಧಿಸಿದ್ದಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಮಂಗಳವಾರ ಪ್ರಧಾನ ನ್ಯಾಯಾಧೀಶ ಅನಿಲ್‌ ಬಿ. ಕಟ್ಟಿ ಅವರ ಕೋರ್ಟ್‌ಗೆ ಹಾಜರುಪಡಿಸಿದರು. ನ್ಯಾಯಾಧೀಶರು ಆರೋಪಿಯನ್ನು ಇದೇ 18ರವರೆಗೆ ಇ.ಡಿ ವಶಕ್ಕೆ ಒಪ್ಪಿಸಿ ಆದೇಶಿಸಿದರು.

‘ರಾಮಕೃಷ್ಣ ಅವರು ಬ್ಯಾಂಕ್‌ನಅಧ್ಯಕ್ಷರಾಗಿದ್ದ ಕಾಲದಲ್ಲಿ 2,876 ಸಾಲಗಳನ್ನು ನೀಡಿದ್ದರು. ಈ ಸಾಲದ ಮೊತ್ತ ₹1,544.43 ಕೋಟಿ. ಇದರಲ್ಲಿ ₹ 892.85 ಕೋಟಿ ಬೋಗಸ್‌ ದಾಖಲೆಗಳಿಗೆ ಸಾಲ ಕೊಡಲಾಗಿದೆ‘ ಎಂದು ಇವರ ವಿರುದ್ಧ ಬಸವನಗುಡಿ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ಸಿಐಡಿ ತನಿಖೆ
ನಡೆಸುತ್ತಿದೆ.

₹ 892 ಕೋಟಿ ಏನಾಯ್ತು ಎಂಬ ಬಗ್ಗೆ ವಿಚಾರಣೆಗೆ ಕರೆಸಿದ್ದ ಇ.ಡಿ ಅಧಿಕಾರಿಗಳು ರಾಮಕೃಷ್ಣ ಅವರನ್ನು ಬಂಧಿಸಿದ್ದರು. ಇ.ಡಿ ಪರ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.