ADVERTISEMENT

ನಷ್ಟ ತಪ್ಪಿಸಿ ಆದಾಯ ಹೆಚ್ಚಿಸುವ ನವೋದ್ಯಮ: ಎನ್. ಚಲುವರಾಯಸ್ವಾಮಿ

ಕೃಷಿ ನವೋದ್ಯಮ ಸಮಾವೇಶದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 16:03 IST
Last Updated 3 ಡಿಸೆಂಬರ್ 2024, 16:03 IST
ಕೃಷಿ ನವೋದ್ಯಮ ಸಮಾವೇಶದಲ್ಲಿ ಆಯೋಜಿಸಿದ್ದ ಪ್ರದರ್ಶನ ಮಳಿಗೆಯೊಂದರಲ್ಲಿ ಮಾಹಿತಿ ಪಡೆದ ವಿದ್ಯಾರ್ಥಿಗಳು
ಪ್ರಜಾವಾಣಿ ಚಿತ್ರ
ಕೃಷಿ ನವೋದ್ಯಮ ಸಮಾವೇಶದಲ್ಲಿ ಆಯೋಜಿಸಿದ್ದ ಪ್ರದರ್ಶನ ಮಳಿಗೆಯೊಂದರಲ್ಲಿ ಮಾಹಿತಿ ಪಡೆದ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹವಾಮಾನ ವೈಪರೀತ್ಯ ನಿರ್ವಹಣೆ ದೊಡ್ಡ ಸವಾಲಾಗಿದ್ದು, ಇಂಥ ಸಂದರ್ಭದಲ್ಲಿ ನವೋದ್ಯಮಗಳು ಕೃಷಿಯಲ್ಲಿ ನಷ್ಟದ ಪ್ರಮಾಣ ತಪ್ಪಿಸಿ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ನೆರವಾಗಲಿವೆ’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ನಾವೀನ್ಯ ಮತ್ತು ಉದ್ಯಮಶೀಲತೆ ಉತ್ತೇಜಿಸಲು ಕೃಷಿ ನವೋದ್ಯಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ಆದಾಯ ಹೆಚ್ಚಿಸಲು‌ ರಾಜ್ಯದಲ್ಲಿ ಮೊದಲ ಬಾರಿಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯ ಆರಂಭಿಸಲಾಗಿದೆ. ರೈತರನ್ನು ಉದ್ದಿಮೆದಾರರನ್ನಾಗಿ ರೂಪಿಸುವುದು. ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ರಫ್ತು ಚಟುವಟಿಕೆಗಳಿಗೆ ಒತ್ತು ನೀಡುವುದು ಸೆಕೆಂಡರಿ ಕೃಷಿಯ ಪ್ರಮುಖ ಉದ್ದೇಶವಾಗಿದೆ’ ಎಂದು ವಿವರಿಸಿದರು.

ADVERTISEMENT

‘ಕೃಷಿ ನವೋದ್ಯಮಗಳಿಂದ ಹೆಚ್ಚು ಹೆಚ್ಚು ತಾಂತ್ರಿಕತೆಗಳು ಹೊರಹೊಮ್ಮಿ ರೈತರನ್ನು ಸುಸ್ಥಿರ ಕೃಷಿಯೆಡೆಗೆ ಕೊಂಡೊಯ್ಯಬೇಕು. ಇಂಥ ಸಮ್ಮೇಳನಗಳು ಯುವಜನರನ್ನು ನವೋದ್ಯಮದೆಡೆಗೆ ಸೆಳೆಯಲು ಸಹಕಾರಿಯಾಗಿವೆ’ ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ಇನ್ನೋವೇಷನ್‌ ಆ್ಯಂಡ್‌ ಟೆಕ್ನಾಲಜಿ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಎಚ್‌.ವಿ.ದರ್ಶನ್ ಮಾತನಾಡಿ, ‘ಬೆಂಗಳೂರು ಸಿಲಿಕಾನ್ ಸಿಟಿ ಅಷ್ಟೇ ಅಲ್ಲದೇ ನವೋದ್ಯಮ ನಗರವಾಗುತ್ತಿದೆ. ಶಾಲಾ ಮತ್ತು ಕಾಲೇಜು ಪಠ್ಯಗಳಲ್ಲಿ ನವೋದ್ಯಮಗಳ ಬಗ್ಗೆ ಮಾಹಿತಿ ನೀಡಬೇಕು. ಆ ಮೂಲಕ ಯುವ ಜನರಲ್ಲಿ ಆಸಕ್ತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಮಾತನಾಡಿ, ‘ಡಿಜಿಟಲ್ ಕೃಷಿಯು ರೈತರ ಅಗತ್ಯಗಳನ್ನು ಪೂರೈಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಬದಲಾದ ಪರಿಸ್ಥಿತಿಯಲ್ಲಿ ರೈತ ಸ್ನೇಹಿ ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಸಂಶೋಧನೆಗಳಾಗಬೇಕು. ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಕೃಷಿ ವಿಜ್ಞಾನ ಕೇಂದ್ರಗಳ ವಿಸ್ತರಣಾ ಚಟುವಟಿಕೆಗಳಲ್ಲಿ ನವೋದ್ಯಮಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದು ಯಶಸ್ವಿಯಾದ ನವೋದ್ಯಮಿಗಳ ಯಶೋಗಾಥೆಗಳನ್ನು ಒಳಗೊಂಡ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಟಿ.ಕೆ.ಪ್ರಭಾಕರ ಶೆಟ್ಟಿ, ಎಂ.ಚಂದ್ರೇಗೌಡ, ಕುಲಸಚಿವ ಕೆ.ಸಿ.ನಾರಾಯಣಸ್ವಾಮಿ, ಸಂಶೋಧನಾ ನಿರ್ದೇಶಕ ಎಚ್‌.ಎಸ್.ಶಿವರಾಮು, ಡೀನ್‌ಗಳಾದ ಮೋಹನ್ ನಾಯ್ಕ್‌, ಎನ್‌.ಬಿ.ಪ್ರಕಾಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.