ADVERTISEMENT

ರೈತರಿಗೆ ಆತ್ಮಹತ್ಯೆ ಗ್ಯಾರಂಟಿ‌ ಕೊಟ್ಟ ರಾಜ್ಯ ಸರ್ಕಾರ: ಜಿ.ಟಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2023, 7:22 IST
Last Updated 9 ಅಕ್ಟೋಬರ್ 2023, 7:22 IST
ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ   

ಬೆಂಗಳೂರು: 'ಐದು ಗ್ಯಾರಂಟಿಗಳಿಂದಾಗಿ ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲವಾಗಿದೆ. ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವು ಕೊಡುವುದಕ್ಕೂ ಹಣದ ಕೊರತೆ ಎದುರಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ಕೊಟ್ಟಿದೆ' ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ವಾಗ್ದಾಳಿ ನಡೆಸಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ರಾಜ್ಯದ 195 ತಾಲ್ಲೂಕುಗಳಲ್ಲಿ ಬರ ಇದೆ ಎಂದು ಸರ್ಕಾರ ಘೋಷಿಸಿದೆ. ಆದರೆ, ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಸ್ಥಗಿತವಾಗಿದೆ. ಇಂತಹ ಸರ್ಕಾರ ಬೇಕಿತ್ತಾ' ಎಂದು ಪ್ರಶ್ನಿಸಿದರು.

ತೀವ್ರ ಬರಗಾಲ ಇರುವಾಗ ಕೃಷಿ ಇಲಾಖೆ ಸತ್ತು ಮಲಗಿದೆ.‌ 200 ಯೂನಿಟ್ ವರೆಗೆ ಉಚಿತ‌ ವಿದ್ಯುತ್ ಒದಗಿಸುವುದಾಗಿ ಸರ್ಕಾರ ಘೋಷಿಸಿದೆ. ರೈತರಿಗೆ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಿಯಾಗಿ ಲಭ್ಯವಾಗುತ್ತಿಲ್ಲ. ರೈತರ ಬಗ್ಗೆ ಮಾತನಾಡಿದರೆ ಸಾಲದು. ರೈತರ ಕೆಲಸವನ್ನೂ ಮಾಡಬೇಕು ಎಂದು ಹೇಳಿದರು.

ADVERTISEMENT

ಬಿಪಿಎಲ್ ಕುಟುಂಬಗಳ ಪ್ರತಿ ವ್ಯಕ್ತಿಗೆ ತಿಂಗಳಿಗೆ ಹತ್ತು ಕೆ.ಜಿ. ಅಕ್ಕಿ ವಿತರಿಸುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೊಡುತ್ತಿರುವ ಐದು ಕೆ.ಜಿ.‌ ಅಕ್ಕಿಯ ವಿತರಣೆಗೆ ಈ ಸರ್ಕಾರದ ಸಾಧನೆ ಸೀಮಿತವಾಗಿದೆ ಎಂದು ಟೀಕಿಸಿದರು‌.

ಟೀಕಿಸುವುದರಲ್ಲಿ‌ ಅರ್ಥವಿಲ್ಲ: ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಮಾತನಾಡಿ, 'ಸೈದ್ಧಾಂತಿಕವಾಗಿ ಪರಸ್ಪರ ವಿರುದ್ಧ ಇರುವ ಕಾಂಗ್ರೆಸ್ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡರೆ ಒಪ್ಪುವವರು ಜೆಡಿಎಸ್-ಬಿಜೆಪಿ ಮೈತ್ರಿಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.