ADVERTISEMENT

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಹೈಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 17:19 IST
Last Updated 4 ಡಿಸೆಂಬರ್ 2021, 17:19 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು: ‘ರಾಜ್ಯ ಒಕ್ಕಲಿಗರ ಸಂಘಕ್ಕೆ ಈಗಾಗಲೇ ಚುನಾವಣಾ ವೇಳಾಪಟ್ಟಿ ಘೋಷಿಸಲಾಗಿದ್ದು, ಈ ಹಂತದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ನಿರ್ದೇಶಿಸಲು ಸಾಧ್ಯವಿಲ್ಲ’ ಎಂದು ಹೇಳಿರುವ ಹೈಕೋರ್ಟ್, ಸಂಘದ ಚುನಾವಣೆಗೆ ಹಸಿರು ನಿಶಾನೆ ತೋರಿಸಿದೆ.

ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ ಅರ್ಜಿಯೂ ಸೇರಿದಂತೆ ವಿವಿಧ ಮನವಿಗಳನ್ನು‌ ಒಳಗೊಂಡ ನಾಲ್ಕು ರಿಟ್ ಹಾಗೂ ಮಧ್ಯಂತರ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶನಿವಾರ ಸುದೀರ್ಘ ವಿಚಾರಣೆ ನಡೆಸಿತು.

‘ನಿಗದಿತ ವೇಳಾಪಟ್ಟಿ ಅನುಸಾರ ಚುನಾವಣೆ ನಡೆಯಬೇಕು. ₹ 11 ಕೋಟಿ ಚುನಾವಣಾ ವೆಚ್ಚವನ್ನು ತಗ್ಗಿಸಲು ನಿರ್ದೇಶನ ನೀಡಬೇಕು ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ಪರಿಗಣಿಸಲು ಆಗುವುದಿಲ್ಲ. ಇಂತಹ ವಿಚಾರದ ಬಗ್ಗೆ ಸಂಘದ ಪ್ರಾಜ್ಞರು ಹಾಗೂ ಹಿರಿಯರೇ ಗಮನಹರಿಸಬೇಕು. ಯಾವ ಸದಸ್ಯರ ಸದಸ್ಯತ್ವವನ್ನು ತೆಗೆದು ಹಾಕಲಾಗಿದೆಯೊ ಅಂತಹವರನ್ನು ಈಗ ಸೇರ್ಪಡೆ ಮಾಡಿಕೊಳ್ಳಲು ನಿರ್ದೇಶನ ನೀಡಲೂ ಸಾಧ್ಯವಿಲ್ಲ. ಹೊಸದಾಗಿ ಅಸ್ತಿತ್ವಕ್ಕೆ ಬರುವ ಆಡಳಿತ ಮಂಡಳಿಯೇ ಇದನ್ನು ಪರಿಶೀಲಿಸಬೇಕು‌. ಚುನಾವಣಾ ವೆಚ್ಚದ ಎಲ್ಲ ಲೆಕ್ಕಪತ್ರಗಳನ್ನು ಚುನಾವಣಾಧಿಕಾರಿ ಹಾಗೂ ಸಂಘದ ಅಧಿಕಾರಿಗಳು ಕರಾರುವಕ್ಕಾಗಿ ದಾಖಲಿಸತಕ್ಕದ್ದು. ಒಂದು ವೇಳೆ ಏನಾದರೂ ದೋಷ ಕಂಡುಬಂದಲ್ಲಿ ಕೋರ್ಟ್ ಗಂಭೀರ ಕ್ರಮ ಕೈಗೊಳ್ಳಲಿದೆ‌’ ಎಂದು ನ್ಯಾಯಪೀಠ ಆದೇಶಿಸಿದೆ.

ADVERTISEMENT

ಈ ಹಿಂದಿನ ವಿಚಾರಣೆ ವೇಳೆ ಕೋರ್ಟ್ ನೀಡಿದ್ದ ಆದೇಶದ ಅನುಸಾರ ಸಂಘದ ಆಡಳಿತಾಧಿಕಾರಿ ಕರಿಗೌಡ ಅವರು ಕೋರ್ಟ್‌ಗೆ ಖುದ್ದು ಹಾಜರಾಗಿದ್ದರು. 5 ಲಕ್ಷ 20 ಸಾವಿರದಷ್ಟು ಬೃಹತ್ ಸಂಖ್ಯೆಯ ಸದಸ್ಯರನ್ನು ಹೊಂದಿರುವ ಸಂಘಕ್ಕೆ ಇದೇ 12ರಂದು ಚುನಾವಣೆ ನಡೆಯಲಿದೆ.

ಆದೇಶದಲ್ಲಿ ಏನಿದೆ?: ‘ಸಾಮ್ರಾಜ್ಯಗಳನ್ನು, ಸಮಾಜವನ್ನು ಕಟ್ಟಲು ಸಾವಿರ ವರ್ಷಗಳು ತಗುಲಿದರೆ ಅವು ಮಣ್ಣುಗೂಡಲು ಕೆಲವೇ ದಿನಗಳು, ತಿಂಗಳುಗಳು ಸಾಕು’ ಎಂಬ ಪ್ರಸಿದ್ಧ ಇಂಗ್ಲಿಷ್ ಕವಿ ಲಾರ್ಡ್ ಬೈರನ್ ಪದ್ಯದ ಸಾಲುಗಳನ್ನು ತಮ್ಮ ಆದೇಶದಲ್ಲಿ
ಉಲ್ಲೇಖಿಸಿರುವ ನ್ಯಾಯಮೂರ್ತಿಗಳು, ‘ರಾಜ್ಯ ಒಕ್ಕಲಿಗರ ಸಂಘಕ್ಕೆ ಶತಮಾನದ ಇತಿಹಾಸವಿದೆ. ಈ ಸಂಘವು ಸಮಾಜಕ್ಕೆ ಬೇಕಾದ ಶೈಕ್ಷಣಿಕ ಸಂಸ್ಥೆಗಳು, ಶಾಲಾ ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳನ್ನು ನೀಡಿದ್ದು, ತನ್ನದೇ ಆದ ಪ್ರಭಾವ ಹೊಂದಿದೆ. ಆದರೆ, ಕೊರೊನಾ ರೋಗ ಇಲ್ಲಿನ ಆಡಳಿತಕ್ಕೂ ತಗುಲಿರುವುದು ವಿಷಾದನೀಯ. ಹೀಗಾಗಬಾರದಿತ್ತು’ ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.