ADVERTISEMENT

ಇನ್ನೂ ಮುಗಿಯದ ಕಾಮಗಾರಿ

ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆಗೆ ಎರಡು ಬಾರಿ ಗಡುವು ವಿಸ್ತರಣೆ: ವಾಹನ ದಟ್ಟಣೆ, ಸವಾರರು ಹೈರಾಣ

ಮನೋಹರ್ ಎಂ.
Published 8 ಫೆಬ್ರುವರಿ 2020, 20:29 IST
Last Updated 8 ಫೆಬ್ರುವರಿ 2020, 20:29 IST
ನಗರದ ಶಿವಾನಂದ ವೃತ್ತದಲ್ಲಿ ನಡೆಯುತ್ತಿರುವ ಗ್ರೇಟ್ ಸಪರೇಟರ್ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ದೃಶ್ಯ ಶುಕ್ರವಾರ ಕಂಡುಬಂತು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ನಗರದ ಶಿವಾನಂದ ವೃತ್ತದಲ್ಲಿ ನಡೆಯುತ್ತಿರುವ ಗ್ರೇಟ್ ಸಪರೇಟರ್ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ದೃಶ್ಯ ಶುಕ್ರವಾರ ಕಂಡುಬಂತು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಸಂಚಾರ ದಟ್ಟಣೆ ತಪ್ಪಿಸಲು ನಗರದ ಶಿವಾನಂದ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಉಕ್ಕಿನ ಸೇತುವೆ ಕಾಮಗಾರಿ ಎರಡು ಬಾರಿ ಗಡುವು ವಿಸ್ತರಣೆ ಬಳಿಕವೂ ಪೂರ್ಣಗೊಂಡಿಲ್ಲ.

9 ತಿಂಗಳಲ್ಲಿ ಇಲ್ಲಿ ಉಕ್ಕಿನ ಸೇತುವೆ ತಲೆ ಎತ್ತಬೇಕಿತ್ತು. ಆದರೆ, ಕೆಲಸ ಶುರುವಾಗಿ ಎರಡೂವರೆ ವರ್ಷಗಳ ಬಳಿಕವೂ ಕುಂಟುತ್ತಾ ಸಾಗಿದೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ನಡೆಯುತ್ತಿರುವ ಕಾಮಗಾರಿಯಿಂದ ಈ ಪರಿಸರದಲ್ಲಿ ವಾಹನ ದಟ್ಟಣೆಯೂ ಹೆಚ್ಚಾಗಿದೆ. ಕುಮಾರಕೃಪಾ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಹರೇಕೃಷ್ಣ ರಸ್ತೆ ಹಾಗೂ ಬಸವೇಶ್ವರ ವೃತ್ತದೆಡೆಗೆ ಸಾಗುವ ರಸ್ತೆಗಳು ಶಿವಾನಂದ ವೃತ್ತದ ಬಳಿ ಸೇರುತ್ತವೆ. ನಾಲ್ಕೂ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ವಾಹನ ಸವಾರರು ಇಲ್ಲಿ ನಿತ್ಯ ಪಡಿಪಾಟಲು ಅನುಭವಿಸುತ್ತಿದ್ದಾರೆ.

ವೈಟ್‌ಟಾಪಿಂಗ್ ಕಾಮಗಾರಿ ಸಲುವಾಗಿ‌ಅರಮನೆ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹಾಗಾಗಿ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ತೆರಳುವ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳೆಲ್ಲಾ ಶಿವಾನಂದ ವೃತ್ತ ಮಾರ್ಗವಾಗಿ ಮೆಜೆಸ್ಟಿಕ್‌ ತಲುಪುತ್ತಿವೆ.

ADVERTISEMENT

ಪಾಲಿಕೆ 2017ರ ಜೂನ್‌ನಲ್ಲಿ ಎಂವಿಆರ್ ಸಂಸ್ಥೆಗೆ ಉಕ್ಕಿನ ಸೇತುವೆಯ ಕಾಮಗಾರಿಯ ಗುತ್ತಿಗೆ ನೀಡಿತ್ತು. 2019ರ ಆಗಸ್ಟ್‌ನಲ್ಲಿ ಕಾಮಗಾರಿ ಪರಿಶೀಲಿಸಿದ್ದ ಆಗಿನ ಮೇಯರ್‌ ಗಂಗಾಂಬಿಕೆ ಕೆಲಸ ಚುರುಕುಗೊಳಿಸುವಂತೆ ಸೂಚಿಸಿದ್ದರು.

ಒಂಬತ್ತು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ರಮೇಶ್ ಭರವಸೆ ನೀಡಿದ್ದರು. ಆ ಪ್ರಕಾರ ಮೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಆದರೆ, ಕಾಮಗಾರಿ ಈಗಲೂ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಗಡುವಿನೊಳಗೂ ಪೂರ್ಣಗೊಳ್ಳುವುದು ಅನುಮಾನ.

‘ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಉಕ್ಕಿನ ಸೇತುವೆ ನಿರ್ಮಿಸುತ್ತಿದ್ದಾರೆ. ಆದರೆ, ಕಾಮಗಾರಿ ವಿಳಂಬದಿಂದ ಈ ಸೇತುವೆಯೇ ದಟ್ಟಣೆ ಹೆಚ್ಚಲು ಕಾರಣವಾಗಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಆಗ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕು. ಇಲ್ಲಿ ಕುಮಾರಕೃಪಾ ರಸ್ತೆಯನ್ನು ಹಾದು ಹೋಗಲು ಕನಿಷ್ಠ 20 ನಿಮಿಷ ಬೇಕು. ಸಂಜೆ ವೇಳೆ ಶಿವಾನಂದ ವೃತ್ತ ರಸ್ತೆಯಲ್ಲಿ ಬರಲು ಭಯವಾಗುತ್ತದೆ’ ಎನ್ನುತ್ತಾರೆ ಆಟೊ ಚಾಲಕ ಎನ್‌.ಕುಮಾರ್.

‘ಉಕ್ಕಿನ ಸೇತುವೆ ಮೇಲ್ಭಾಗದಲ್ಲಿ ಒಂದೆಡೆ ಕಾಂಕ್ರೀಟ್‌ ಹಾಕಲಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಪಿಲ್ಲರ್‌ಗಳನ್ನು ಕೊರೆಯುವಾಗ ಯಂತ್ರಗಳ ಶಬ್ದ ಆಗಾಗ ಕೇಳಿ ಬರುತ್ತದೆ’ ಎಂದು ಸ್ಥಳೀಯ ಅಂಗಡಿ ವ್ಯಾಪಾರಿ ಮಹೇಶ್‌ ತಿಳಿಸಿದರು.

‘ಮೆಜೆಸ್ಟಿಕ್‌ ತಲುಪಲು ಪರ್ಯಾಯ ರಸ್ತೆಗಳಿಲ್ಲ. ಅರಮನೆ ರಸ್ತೆ ಮೂಲಕ ಮೆಜೆಸ್ಟಿಕ್ ಬೇಗ ತಲುಪಬಹುದು. ವೈಟ್‌ಟಾಪಿಂಗ್‌ ಕಾಮಗಾರಿಯಿಂದ ಆ ಮಾರ್ಗ ಬಂದ್‌ ಆಗಿದೆ. ಶಿವಾನಂದ ವೃತ್ತದ ಮಾರ್ಗದಲ್ಲಿ ಸಂಚರಿಸಿದರೆ, ದಟ್ಟಣೆಯಿಂದ ಬಹಳ ಸಮಯ ವ್ಯರ್ಥವಾಗುತ್ತದೆ. ಕಾಮಗಾರಿ ಬೇಗ ಪೂರ್ಣಗೊಂಡರೆ ದಟ್ಟಣೆ ತಗ್ಗಲಿದೆ’ ಎಂದು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಅಂಬರೀಷ್‌ ತಿಳಿಸಿದರು.

‘6 ತಿಂಗಳಲ್ಲಿ ಕಾಮಗಾರಿ ಪೂರ್ಣ’

‘ಕಳೆದ ವರ್ಷವೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.ಆರಂಭದಲ್ಲಿ 326.25 ಮೀ. ಉದ್ದದ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು.ಸಂಚಾರ ದಟ್ಟಣೆ ನಿವಾರಣೆ ದೃಷ್ಟಿಯಿಂದ ಈ ಸೇತುವೆಯ ಉದ್ದವನ್ನು482 ಮೀಟರ್‌ಗಳಿಗೆ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಇದರಿಂದ ಕಾಮಗಾರಿ ತಡವಾಗಿದೆ. ಆರು ತಿಂಗಳಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣವಾಗಲಿದೆ’ ಎಂದು ಪಾಲಿಕೆಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ರಮೇಶ್ ತಿಳಿಸಿದರು.

ಅಂಕಿ ಅಂಶ

* 482 ಮೀ –ಶಿವಾನಂದ ವೃತ್ತ ಉಕ್ಕಿನ ಸೇತುವೆಯ ಉದ್ದ

* 16 –ಉಕ್ಕಿನ ಕಂಬಗಳು ನಿರ್ಮಾಣವಾಗಲಿವೆ

* ₹60 ಕೋಟಿ –ಯೋಜನೆಯ ಅಂದಾಜು ವೆಚ್ಚ

***

ಮಲ್ಲೇಶ್ವರ ತಲುಪಲು ಇದೇ ಮಾರ್ಗದಲ್ಲಿ ಸಾಗುತ್ತೇನೆ. ದಟ್ಟಣೆಯಿಂದ ಅರ್ಧಗಂಟೆ ಮುಂಚಿತವಾಗಿ ಹೊರಡುತ್ತೇನೆ. ಸೇತುವೆ ಸಿದ್ಧವಾದರೆ ಸಮಯ ಉಳಿಯಲಿದೆ.
– ಅನಿಲ್, ಖಾಸಗಿ ಕಂಪನಿ ಉದ್ಯೋಗಿ

ನಗರ ಪ್ರವೇಶಿಸಲು ಇದು ಪ್ರಮುಖ ರಸ್ತೆ. ದಟ್ಟಣೆಯಿಂದ ನಿತ್ಯ ಹೈರಾಣಾಗುತ್ತೇನೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಜವಾಬ್ದಾರಿ ಪಾಲಿಕೆಯದ್ದು.

– ಪೆಂಚಲ ರಾವ್, ಬೈಕ್ ಸವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.