ಬೆಂಗಳೂರು: ‘ಹಕ್ಕುಪತ್ರ ನೀಡಿ, ಗುಡಿಸಲು ವಾಸದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿ ಬೆಂಗಳೂರು ಉತ್ತರ ತಾಲ್ಲೂಕಿನ ಸಾಕಮ್ಮ ಬಡಾವಣೆಯ ನಿವಾಸಿಗಳು ಸೋಮವಾರ ಕೋಳಿ, ಕುರಿ, ದನಗಳ ಸಹಿತ ಕಗ್ಗಲಿಪುರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹಕ್ಕುಪತ್ರ ನೀಡುವವರೆಗೂ ಪಂಚಾಯಿತಿ ಕಚೇರಿ ಬಿಟ್ಟು ತೆರಳುವುದಿಲ್ಲ ಎಂದು ಹಠ ಹಿಡಿದ ನಿವಾಸಿಗಳು, ಆವರಣದಲ್ಲೇ ಜಾನುವಾರುಗಳೊಂದಿಗೆ ಪ್ರತಿಭಟನೆಗೆ ಕುಳಿತರು. ಅಲ್ಲೇ ಅಡುಗೆ ಮಾಡಲು ಸಿದ್ಧರಾದರು.
ಇದರಿಂದ ಕಂಗಾಲಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರನ್ನು ಕರೆಸಿದರು. ‘ನಾವು ಪ್ರತಿಭಟನೆಗೆ ಬಂದಿಲ್ಲ. ಗುಡಿಸಲು ವಾಸ ಕಷ್ಟವಾಗಿದ್ದು, ಇದರಿಂದ ಮುಕ್ತಿ ಪಡೆಯಲು ನಿವೇಶನದ ಹಕ್ಕುಪತ್ರಗಳನ್ನು ಪಡೆಯಲು ಕಚೇರಿಗೆ ಬಂದಿದ್ದೇವೆ. ಹಕ್ಕುಪತ್ರ ನೀಡುವವರೆಗೂ ಕಚೇರಿಯ ಮುಂಭಾಗದ ಪಡಸಾಲೆಯಲ್ಲಿ ವಾಸ ಮಾಡುತ್ತೇವೆ’ ಎಂದು ಪೊಲೀಸರಿಗೆ, ಅಧಿಕಾರಿಗಳಿಗೆ ಪ್ರತಿಕ್ರಿಯಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ರೈತ ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ನದೀಂ ಪಾಷ, ‘50 ವರ್ಷಗಳಿಂದ, ಗುಡಿಸಲಲ್ಲಿ ವಾಸಿಸುತ್ತಿರುವ ಸಾಕಮ್ಮ ಬಡಾವಣೆಯವರ ಬದುಕು ನಿತ್ಯ ನರಕವಾಗಿದೆ. ಗುಡಿಸಲು ಮುಕ್ತ, ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಗಳನ್ನು ಕೂಗುವ ರಾಜ್ಯದ ನಾಯಕರು ಒಂದು ದಿನ ಈ ಗುಡಿಸಲಲ್ಲಿ ವಾಸ್ತವ್ಯ ಮಾಡಿ ನೋಡಲಿ. ಆಗಲಾದರೂ ಈ ಜನರ ಸಂಕಷ್ಟ ಅರ್ಥವಾದೀತು’ ಎಂದು ಹೇಳಿದರು.
ನಂತರ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರ್ವೀಜ್, ‘ಪಂಚಾಯಿತಿ ವತಿಯಿಂದ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ತಕ್ಷಣವೇ ಗ್ರಾಮ ಸಭೆ ಆಯೋಜಿಸಿ ಈ ಬಗ್ಗೆ ವಿಚಾರ ಮಂಡಿಸಿ ನಿರ್ಣಯ ಕೈಗೊಂಡು ಫಲಾನುಭವಿಗಳ ಪಟ್ಟಿ ಮಾಡಿ ಸಂಬಂಧಿಸಿದ ಇಲಾಖೆಗೆ ಕಳಿಸುತ್ತೇವೆ’ ಎಂದು ಭರವಸೆ ನೀಡಿದರು.
‘ನಾವು ಸಾಕಮ್ಮ ಬಡಾವಣೆಯ ನಿವಾಸಿಗಳ ಪರವಾಗಿದ್ದೇವೆ. ಆದರೆ ಸ್ಥಳೀಯ ದಲಿತ ಮುಖಂಡರೊಬ್ಬರು ತಮ್ಮ ಸಂಘಟನೆಯವರು ಹೇಳಿದವರಿಗೆ ಹಕ್ಕುಪತ್ರ ಕೊಡಬೇಕು’ ಎಂದು ದೂರು ನೀಡಿ ತೊಂದರೆ ಕೊಡುತ್ತಿದ್ದರು. ಆದರೆ, ನಾವು ಕಾನೂನು ಪ್ರಕ್ರಿಯೆಗಳ ಅನುಸಾರವೇ ಕೆಲಸ ನಿರ್ವಹಿಸಿ ಸಾಕಮ್ಮ ಬಡಾವಣೆಯ ಜನರಿಗೆ ಹಕ್ಕು ಪತ್ರ ವಿತರಿಸುತ್ತೇವೆ’ ಎಂದು ತಿಳಿಸಿದರು.
ರಾಜ್ಯ ರೈತ ಹಿತರಕ್ಷಣಾ ಸಂಘದ ಪ್ರಶಾಂತ್ ಹೊಸದುರ್ಗ, ವೆಂಕಟೇಶ್, ರಾಮು ಹಾಗೂ ಸಾಕಮ್ಮ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.
ಮಳೆ ಬಂದಾಗ ಗುಡಿಸಲಿಗೆ ನೀರು ನುಗ್ಗುತ್ತದೆ. ನಮಗೆ ಹಕ್ಕುಪತ್ರ ನೀಡಿ ಇಲ್ಲವೇ ದಯಾಮರಣ ನೀಡಿಸಾಕಮ್ಮ ವೃದ್ಧೆ
ಅಲ್ಲೇ ಅಡುಗೆ
ಬೆಳಿಗ್ಗೆ ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲು ತೆರೆಯುತ್ತಿದ್ದಂತೆ ಸಾಕಮ್ಮ ಬಡಾವಣೆಯ ಗುಡಿಸಲು ನಿವಾಸಿಗಳು ಜಾನುವಾರುಗಳೊಂದಿಗೆ ಕಚೇರಿಯ ಆವರಣ ಪ್ರವೇಶಿಸಿ ಬಾಗಿಲ ಬಳಿ ಕುಳಿತರು. ಜಾನುವಾರುಗಳನ್ನು ಕಚೇರಿಯ ಆವರಣದಲ್ಲಿಯೇ ಕಟ್ಟಿಹಾಕಿದರು. ಅಲ್ಲೇ ಒಲೆ ವ್ಯವಸ್ಥೆ ಮಾಡಿ ಅಡುಗೆ ಮಾಡಲು ಆರಂಭಿಸಿದರು. ‘ಬರುವ ಶುಕ್ರವಾರವೇ ವಿಶೇಷ ಸಭೆ ಕರೆದು ಹಕ್ಕುಪತ್ರ ವಿತರಿಸುವ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ’ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರ ನಿವಾಸಿಗಳು ಪ್ರತಿಭಟನೆ ಕೈಬಿಟ್ಟರು. ನಂತರ ಅಲ್ಲೇ ತಯಾರಿಸಿದ ಅಡುಗೆಯನ್ನು ಊಟ ಮಾಡಿ ನಂತರ ಅಲ್ಲಿಂದ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.