ADVERTISEMENT

ಮರದ ಕಂಬ ಬಿದ್ದು ವಿದ್ಯಾರ್ಥಿನಿ ಸಾವು | ಎಂಜಿನಿಯರ್‌ ವಿಚಾರಣೆ: ಮಾಲೀಕ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 20:08 IST
Last Updated 5 ಜನವರಿ 2025, 20:08 IST
   

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್‌ಗೆ ಅಳವಡಿಸಲಾಗಿದ್ದ ಮರದ ಕಂಬಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ತೇಜಸ್ವಿನಿ(15) ಮೃತಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ವಿ.ವಿ ಪುರ ಠಾಣೆ ಪೊಲೀಸರು, ಎಂಜಿನಿಯರ್‌ ಚಂದ್ರಶೇಖರ್ ಅವರನ್ನು ಭಾನುವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಕಟ್ಟಡದ ಮಾಲೀಕ, ಗುತ್ತಿಗೆದಾರ ಹಾಗೂ ಕಾರ್ಮಿಕರು ತಲೆಮರೆಸಿಕೊಂಡಿದ್ದಾರೆ.

ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದ ಸಮೀಪ ನಿರ್ಮಾಣ ಹಂತದ ಕಟ್ಟಡಕ್ಕೆ ಅಳವಡಿಸಿದ್ದ ಮರದ ಕಂಬಗಳು ಬಿದ್ದು ತೇಜಸ್ವಿನಿ ಮೃತಪಟ್ಟಿದ್ದಳು. ದುರ್ಘಟನೆಗೆ ಕಾರಣವಾದ ನಿರ್ಮಾಣ ಹಂತದ ಕಟ್ಟಡ ಮಾಲೀಕ, ಗುತ್ತಿಗೆದಾರ, ಎಂಜಿನಿಯರ್, ಬಿಬಿಎಂಪಿ ಅಧಿಕಾರಿಗಳು ಹಾಗೂ ಇತರರ ವಿರುದ್ಧ ವಿ.ವಿ.ಪುರ ಠಾಣೆ ಪೊಲೀಸರು ಬಿಎನ್‌ಎಸ್ ಕಾಯ್ದೆಯ ಸೆಕ್ಷನ್‌ 106(1)ರ ( ನಿರ್ಲಕ್ಷ್ಯ ಆರೋಪ) ಅಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು.

ADVERTISEMENT

ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದುಕೊಂಡು ಘಟನೆ ಸಂಬಂಧ ವಿಚಾರಣೆ ನಡೆಸಲಾಗಿದೆ. ಬಳಿಕ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಕೊಟ್ಟು ಕಳುಹಿಸಲಾಗಿದೆ.

ನಾಪತ್ತೆಯಾದವರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ. ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿಲ್ಲ ಎಂಬುದು ಗೊತ್ತಾಗಿದೆ. ಎಲ್ಲಾ ಆರೋಪಿಗಳನ್ನು ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಿದ್ಯಾರ್ಥಿನಿಯ ಮೃತದೇಹವನ್ನು ಭಾನುವಾರ ಮಧ್ಯಾಹ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಇದಕ್ಕೂ ಮೊದಲು ಮೃತದೇಹ ಹಸ್ತಾಂತರ ವಿಳಂಬ ಮಾಡಲಾಗುತ್ತಿದೆ, ಆರೋಪಿಗಳ ಬಂಧನ ಮಾಡಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.

‘ಖಾಲಿ ಪೇಪರ್ ಮೇಲೆ ಸಹಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಕಟ್ಟಡದ ಮಾಲೀಕರ ಬಳಿ ಬಳಿ ಏನಾದರೂ ಮಾತನಾಡುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ತೇಜಸ್ವಿನಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕೆ.ಜಿ.ನಗರ ನಿವಾಸಿ ಖಾಸಗಿ ಸಂಸ್ಥೆಯಲ್ಲಿ ಕಾರು ಚಾಲಕ ಸುಧಾಕರ್ ಹಾಗೂ ಧನಲಕ್ಷ್ಮಿ ದಂಪತಿಯ ಹಿರಿಯ ಪುತ್ರಿ ತೇಜಸ್ವಿನಿ. ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಾಲೆ ಮುಗಿಸಿಕೊಂಡು ಎನ್‌ಎಚ್‌ಎಸ್ ರಸ್ತೆಯ ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣ ಸಮೀಪ ನಡೆದುಕೊಂಡು ಮನೆಗೆ ಹೋಗುತ್ತಿದ್ದಳು. ಅದೇ ಮಾರ್ಗದಲ್ಲಿ ನಿರ್ಮಾಣ ಆಗುತ್ತಿರುವ ಆರು ಅಂತಸ್ತಿನ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ನಡೆಯುತ್ತಿತ್ತು. ಕಾರ್ಮಿಕರು ಸೆಂಟ್ರಿಂಗ್‌ಗೆ ಮರದ ಕಂಬಗಳನ್ನು ಅಳವಡಿಸುತ್ತಿದ್ದರು. ಆಗ ಮರದ ಕಂಬಗಳು ವಿದ್ಯಾರ್ಥಿನಿ ತಲೆಮೇಲೆ ಬಿದ್ದು ಮೃತಪಟ್ಟಿದ್ದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.