ADVERTISEMENT

ಮರದ ಕಂಬಗಳು ಬಿದ್ದು ವಿದ್ಯಾರ್ಥಿನಿ ಸಾವು ಪ್ರಕರಣ: ಪತ್ತೆಯಾಗದ ಕಟ್ಟಡದ ಮಾಲೀಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 23:54 IST
Last Updated 6 ಜನವರಿ 2025, 23:54 IST
   

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್‌ಗೆ ಅಳವಡಿಸಿದ್ದ ಮರದ ಕಂಬಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ತೇಜಸ್ವಿನಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಕಟ್ಟಡದ ಮಾಲೀಕ, ಗುತ್ತಿಗೆದಾರ ಮತ್ತು ಕಾರ್ಮಿಕರ ಪತ್ತೆ ಕಾರ್ಯವನ್ನು ವಿ.ವಿ.ಪುರ ಠಾಣೆ ಪೊಲೀಸರು ಮುಂದುವರಿಸಿದ್ದಾರೆ.

ಮೃತ ವಿದ್ಯಾರ್ಥಿನಿ ಅವರ ತಂದೆ ಸುಧಾಕರ್ ರಾವ್ ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲೀಕ ಹರ್ಷ, ಗುತ್ತಿಗೆದಾರ ಚಂದ್ರಶೇಖರ್, ಎಂಜಿನಿಯರ್, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಪಾಲಿಕೆ ಅಧಿಕಾರಿಗಳು ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿರಲಿಲ್ಲ. ಹಾಗಾಗಿ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ. ಬಿಬಿಎಂಪಿ ಕಚೇರಿಗೆ ತೆರಳಿ ಮಾಹಿತಿ ಕಲೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಭಾನುವಾರ ರಾತ್ರಿ ಗುತ್ತಿಗೆದಾರ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಯಿತು. ಮತ್ತೆ ವಿಚಾರಣೆಗೆ ಕರೆದರೆ ಬರುವಂತೆ ಅವರಿಗೆ ಸೂಚಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದರು.

ಕಟ್ಟಡದ ಮಾಲೀಕ ಹರ್ಷ ಸೇರಿದಂತೆ ಇತರರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಆದರೂ ವಿಚಾರಣೆಗೆ ಗೈರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.