ADVERTISEMENT

8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 19:57 IST
Last Updated 12 ಡಿಸೆಂಬರ್ 2019, 19:57 IST
ವೇಣು ಗೋಪಾಲ್
ವೇಣು ಗೋಪಾಲ್   

ಬೆಂಗಳೂರು: ಖಾಸಗಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಮ್ಮಲೂರಿನಲ್ಲಿ ನಡೆದಿದೆ.

ದೊಮ್ಮಲೂರು ನಿವಾಸಿ ಸುರೇಶ್ ಮತ್ತು ಲಕ್ಷ್ಮೀ ದಂಪತಿಯ ಪುತ್ರ ವೇಣುಗೋಪಾಲ್ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಶಾಲೆಯಲ್ಲಿ ಸಹಪಾಠಿ ಜತೆ ಜಗಳದ ವಿಷಯವಾಗಿ ಶಿಕ್ಷಕರು ಬುದ್ಧಿಮಾತು ಹೇಳಿದ್ದರಿಂದ ನೊಂದು, ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ಮನೆ ಸಮೀಪದ ನಿರ್ಜನ ಪ್ರದೇಶದಲ್ಲಿ ವೇಣುಗೋಪಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ‘ಗುರುವಾರ ಬೆಳಿಗ್ಗೆ ಮೃತದೇಹ ನೋಡಿ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಸಿಬ್ಬಂದಿ ತೆರಳಿ ಪರಿಶೀಲಿಸಿದಾಗ ಮೃತನ ಗುರುತು ಪತ್ತೆಯಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ADVERTISEMENT

ಪೋಷಕರ ಆಕ್ರೋಶ: ವೇಣುಗೋಪಾಲ್‌ ತಂದೆ ಸುರೇಶ್, ಖಾಸಗಿ ಶಾಲೆಯ ವಾಹನ ಚಾಲಕರಾಗಿದ್ದು, ಪತ್ನಿ ಮತ್ತು ಇಬ್ಬರ ಮಕ್ಕಳ ಜತೆ ದೊಮ್ಮಲೂರಿನಲ್ಲಿ ವಾಸವಾಗಿದ್ದಾರೆ. ಮನೆ ಸಮೀಪ ಪಟೇಲ್ ರಾಮಿರೆಡ್ಡಿ ಪ್ರೌಢಶಾಲೆಯಲ್ಲಿ ವೇಣುಗೋಪಾಲ್ ಎಂಟನೇ ತರಗತಿಯಲ್ಲಿ ಓದುತ್ತಿದ್ದ.

ತನ್ನ ಸಹಪಾಠಿಯೊಬ್ಬನಿಗೆ ಸೋಮವಾರ ಕಂಪಾಸ್‌ನಿಂದ ಚುಚ್ಚಿ ವೇಣುಗೋಪಾಲ್ ಗಾಯಗೊಳಿಸಿದ್ದ. ಈ ಬಗ್ಗೆ ಶಿಕ್ಷಕರು, ವೇಣುಗೋಪಾಲ್‌ನನ್ನು ತರಾಟೆ ತೆಗೆದುಕೊಂಡಿದ್ದರು. ಈ ರೀತಿಯ ವರ್ತನೆ ಮರುಕಳಿಸಿದರೆ ವರ್ಗಾವಣೆ ಪತ್ರ (ಟಿ.ಸಿ) ಕೊಡುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಅಲ್ಲದೆ, ಶಾಲೆಗೆ ಪೋಷಕರನ್ನು ಕರೆದುಕೊಂಡು ಬರುವಂತೆಯೂ ಹೇಳಿದ್ದರು ಎಂದೂ ಹೇಳಲಾಗಿದೆ. ಎಂದಿನಂತೆ ಬುಧವಾರ ಸಂಜೆ ಶಾಲೆಯಿಂದ ಮನೆಗೆ ಬಂದಿದ್ದ ವೇಣುಗೋಪಾಲ್, ಆಡಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಬಂದಿದ್ದಾನೆ. ರಾತ್ರಿಯಾದರೂ ಮಗ ಮನೆಗೆ ಮರಳದೇ ಇದ್ದಾಗ ಆತಂಕಗೊಂಡ ಆತನ ಪೋಷಕರು, ಹಲಸೂರು ಠಾಣೆಗೆ ತೆರಳಿ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಅದರ ಅನ್ವಯ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು.

‘ಶಾಲಾ ಸಿಬ್ಬಂದಿಯೇ ಕಾರಣ’

ವೇಣುಗೋಪಾಲ್ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಆಕ್ರೋಶಗೊಂಡ ಆತನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಮಗನ ಸಾವಿಗೆ ಶಾಲಾ ಸಿಬ್ಬಂದಿಯೇ ಕಾರಣ’ ಎಂದು ಪೋಷಕರು ಆರೋಪಿಸಿದರು. ‘ಮಗನಿಗೆ ಶಾಲೆಯಲ್ಲಿ ಶಿಕ್ಷಕರು ಹೊಡೆದಿದ್ದಾರೆ, ನಿಂದಿಸಿದ್ದಾರೆ. ಇದರಿಂದ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದೂ ದೂರಿದ್ದಾರೆ.

ಆದರೆ, ಶಾಲಾ ಮಂಡಳಿ ಈ ಆರೋಪಗಳನ್ನು ತಳ್ಳಿಹಾಕಿದೆ. ‘ವಿದ್ಯಾರ್ಥಿ ಆಗಾಗ ಶಾಲೆ ತಪ್ಪಿಸುತ್ತಿದ್ದ. ಇತರೆ ಮಕ್ಕಳ ಜೊತೆಗೂ ಗಲಾಟೆ ಮಾಡುತ್ತಿದ್ದ. ಈ ಕಾರಣಕ್ಕೆ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ಶಿಕ್ಷಕರು ಹೇಳಿದ್ದರು ಅಷ್ಟೇ’ ಎಂದು ಶಾಲೆಯ ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.