ADVERTISEMENT

ವಿದ್ಯುತ್‌ ಹೊರೆ ನೀಗಿಸಲಿದೆ ಉಪಕೇಂದ್ರ: ಸಚಿವ ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 16:29 IST
Last Updated 20 ಫೆಬ್ರುವರಿ 2025, 16:29 IST
ನೆಲಮಂಗಲ ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯಲ್ಲಿ  220 ಕೆ.ವಿ.ವಿದ್ಯುತ್‌ ಉಪಕೇಂದ್ರ ಕಾಮಗಾರಿಗೆ ಸಚಿವ ಕೆ.ಜೆ.ಜಾರ್ಜ್‌ ಭೂಮಿ ಪೂಜೆ ನೆರವೇರಿಸಿದರು. 
ನೆಲಮಂಗಲ ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯಲ್ಲಿ  220 ಕೆ.ವಿ.ವಿದ್ಯುತ್‌ ಉಪಕೇಂದ್ರ ಕಾಮಗಾರಿಗೆ ಸಚಿವ ಕೆ.ಜೆ.ಜಾರ್ಜ್‌ ಭೂಮಿ ಪೂಜೆ ನೆರವೇರಿಸಿದರು.    

ನೆಲಮಂಗಲ: ‘ನೆಲಮಂಗಲಕ್ಕೆ ಉತ್ತಮ ಗುಣಮಟ್ಟದ ವಿದ್ಯುತ್‌ ಒದಗಿಸುವ ದೃಷ್ಟಿಯಿಂದ 220 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ಉಪಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ನಗರಸಭೆ ವ್ಯಾಪ್ತಿಯ ಬಸವನಹಳ್ಳಿಯಲ್ಲಿ ₹300 ಕೋಟಿ ವೆಚ್ಚದ 220 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ಉಪಕೇಂದ್ರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ರೈತರಿಗೆ ಶೇ 80ರ ಸಬ್ಸಿಡಿಯಲ್ಲಿ ಸೋಲಾರ್‌ ಪಂಪ್‌ಸೆಟ್‌ಗಳನ್ನು ನೀಡುತ್ತಿದ್ದೇವೆ. ಪಾವಗಡದಲ್ಲಿ ಬೃಹತ್‌ ಸೋಲಾರ್‌ ಪಾರ್ಕ್‌ ಅನುಷ್ಠಾನ ಮಾಡಿ ರಾಜ್ಯದ ವಿದ್ಯುತ್‌ ಕೊರತೆಯನ್ನು ನೀಗಿಸಿದ್ದೇವೆ. ಇದರ ಯಶಸ್ಸಿನಿಂದ ಇನ್ನೂ ಅಲ್ಲಿನ ಗ್ರಾಮಸ್ಥರು 10 ಸಾವಿರ ಎಕರೆಯನ್ನು ಸೋಲಾರ್‌ ಪಾರ್ಕ್‌ಗೆ ನೀಡಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಶಾಸಕ ಎನ್‌.ಶ್ರೀನಿವಾಸ್‌ ಮಾತನಾಡಿ, ‘ಕೃಷಿ, ಕೈಗಾರಿಕೆ ಮತ್ತು ಗೃಹ ಬಳಕೆಗೆ ಗುಣಮಟ್ಟದ ವಿದ್ಯುತ್ ಪೂರೈಸಲು 220 ಕೆ.ವಿ. ಉಪಕೇಂದ್ರ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ವಿಚಾರವಾಗಿ ಮುಖ್ಯಮಂತ್ರಿಯವರಿಗೆ, ಸಚಿವರಿಗೆ ಮನವಿ ಮಾಡಿದ್ದೆ. ನನ್ನ ಮನವಿಗೆ ಅವರು ಸ್ಪಂದಿಸಿದ್ದಾರೆ’ ಎಂದು ತಿಳಿಸಿದರು. 

‘ಉಪಕೇಂದ್ರ ಸ್ಥಾಪಿಸುವುದರಿಂದ, ಭವಿಷ್ಯದಲ್ಲಿ ಯಾವುದೇ ರೀತಿಯ ವೋಲ್ಟೇಜ್ ಸಮಸ್ಯೆ ಬರುವುದಿಲ್ಲ. ದಾಬಸ್‌ಪೇಟೆಯಲ್ಲಿರುವ ಉಪಕೇಂದ್ರದ ಹೊರೆಯನ್ನೂ ತಗ್ಗಿಸಬಹುದು’ ಎಂದರು. 

‘ಮುಂದೆ ನಗರಸಭೆ ವ್ಯಾಪ್ತಿಯ ಎಲ್ಲ ಬಡಾವಣೆಗಳಿಗೆ ₹150 ಕೋಟಿ ವೆಚ್ಚದಲ್ಲಿ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಿದ್ದೇನೆ’ ಎಂದರು.

ವಿಧಾನ ಪರಿಷತ್ ಸದಸ್ಯ ರವಿ ಮಾತನಾಡಿದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಗೌಡ, ತಾಲ್ಲೂಕು ಅಧ್ಯಕ್ಷ ವಜ್ರಘಟ್ಟ ನಾಗರಾಜು, ಮುಖಂಡ ಎಂ.ಕೆ.ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.