ADVERTISEMENT

‘ಉಪನಗರ ರೈಲು: ಅನುಮೋದನೆ ಅನುದಾನ ಶೀಘ್ರ ಸಿಗಲಿ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 18:48 IST
Last Updated 19 ಅಕ್ಟೋಬರ್ 2019, 18:48 IST
ಕಾರ್ಯಕ್ರಮದಲ್ಲಿ ಸಂಜೀವ್‌ ದ್ಯಾಮಣ್ಣವರ (ಬಲಬದಿ) ಮಾತನಾಡಿದರು. ಎಂಜಿನಿಯರ್‌ಗಳ ಸಂಸ್ಥೆಯ ಅಧ್ಯಕ್ಷ ಜಸ್ಮಾಯಿಲ್‌ ಸಿಂಗ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಸಂಜೀವ್‌ ದ್ಯಾಮಣ್ಣವರ (ಬಲಬದಿ) ಮಾತನಾಡಿದರು. ಎಂಜಿನಿಯರ್‌ಗಳ ಸಂಸ್ಥೆಯ ಅಧ್ಯಕ್ಷ ಜಸ್ಮಾಯಿಲ್‌ ಸಿಂಗ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಉಪನಗರ ರೈಲು ಯೋಜನೆಗೆ ಸಂಬಂಧಿಸಿದ ಸಣ್ಣ–ಪುಟ್ಟಕಾರ್ಯಗಳಿಗೂ ಅನುಮೋದನೆ ತ್ವರಿತವಾಗಿ ಸಿಗಬೇಕು ಮತ್ತು ಅಷ್ಟೇ ಶೀಘ್ರದಲ್ಲಿ ಅನುದಾನವನ್ನು ಒದಗಿಸಬೇಕು. ಈ ಕಾರ್ಯದಲ್ಲಿ ವಿಳಂಬವಾಗುತ್ತಿರುವುದರಿಂದ ಯೋಜನೆಯ ಅನುಷ್ಠಾನವೂ ಆಮೆಗತಿಯಲ್ಲಿ ಸಾಗುತ್ತಿದೆ’ ಎಂದು ರೈಲ್ವೆ ಹೋರಾಟಗಾರ ಸಂಜೀವ ದ್ಯಾಮಣ್ಣವರ್‌ ಹೇಳಿದರು.

ಎಂಜಿನಿಯರ್‌ಗಳ ಸಂಸ್ಥೆಯು ಶನಿವಾರ ಏರ್ಪಡಿಸಿದ್ದ ‘ಬೆಂಗಳೂರಿನಲ್ಲಿ ಉಪನಗರ ರೈಲಿನ ಪ್ರಸ್ತುತ ಸ್ಥಿತಿಗತಿ’ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ‘ಉಪನಗರ ರೈಲು ಯೋಜನೆ ಸಂಬಂಧ ವಿಶೇಷ ಉದ್ದೇಶದ ಘಟಕದಲ್ಲಿ (ಎಸ್‌ಪಿವಿ) ಯಾವೆಲ್ಲ ಅಂಶಗಳು ಇರಬೇಕು ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ರೈಲ್ವೆ ಸಚಿವಾಲಯ ಚರ್ಚೆ ನಡೆಸಿ ಅಂತಿಮಗೊಳಿಸಿವೆ. ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡಬೇಕಿದೆ’ ಎಂದರು.

‘ಯೋಜನೆಗಳ ಅನುಷ್ಠಾನ ವಿಳಂಬವಾಗುವುದರಿಂದ ವೆಚ್ಚವೂ ಹೆಚ್ಚಾಗುತ್ತದೆಯಲ್ಲದೆ, ಜನರಿಗೆ ಸೌಲಭ್ಯ ದೊರಕುವುದೂ ತಡವಾಗುತ್ತದೆ’ ಎಂದರು.

ADVERTISEMENT

‘ವೈಟ್‌ ಟಾಪಿಂಗ್‌, ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಇದರ ಬದಲು ಉಪನಗರ ರೈಲ್ವೆ ಯೋಜನೆಗಳಿಗೆ ಹೆಚ್ಚು ಅನುದಾನ ಒದಗಿಸಬೇಕು’ ಎಂದರು.

‘ನಗರದೊಳಗೆ ರೈಲ್ವೆ ಇಲಾಖೆ ಸಾಕಷ್ಟು ಜಾಗವನ್ನು ಹೊಂದಿದೆ. ಆದರೆ, ಅದನ್ನು ಬಳಸಿಕೊಳ್ಳುತ್ತಿಲ್ಲ. ಇಷ್ಟು ಜಾಗವಿಟ್ಟುಕೊಂಡು ಅದನ್ನು ಬಳಸದೇ ಇದ್ದರೆ ಏನು ಪ್ರಯೋಜನ’ ಎಂದು ಅವರು ಪ್ರಶ್ನಿಸಿದರು.

‘ಇಂತಹ ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು. ಅದರಲ್ಲಿಯೂ, ಕೇಂದ್ರ ಸರ್ಕಾರ ಮುಂದಾಳತ್ವ ವಹಿಸಬೇಕು. ಆದರೆ, ಎಲ್ಲ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹಾಕಿ, ನೀವೇ ಬಂಡವಾಳ ಹೂಡಿ ಎಂದು ಹೇಳುತ್ತದೆ. ಕೇಂದ್ರದ ಅನುಮೋದನೆ ವಿಳಂಬವಾಗುವುದರಿಂದ ರಾಜ್ಯ ಸರ್ಕಾರವು ಉಪನಗರ ರೈಲಿನಂತಹ ದೀರ್ಘಾವಧಿ ಯೋಜನೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.