ADVERTISEMENT

ಸುಗಮ ಸಂಗೀತ: ತಾತ್ವಿಕ ತಳಹದಿ ಕಲ್ಪಿಸಿದ ಲೀಲಾವತಿ- ವೆಂಕಟೇಶಮೂರ್ತಿ

‘ಹಾಡಾಗಿ ಹರಿದಾಳೆ’ ಆತ್ಮಕಥೆ ಬಿಡುಗಡೆ ಸಮಾರಂಭದಲ್ಲಿ ಕವಿ ಎಚ್‌. ಎಸ್‌ ವೆಂಕಟೇಶಮೂರ್ತಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 19:30 IST
Last Updated 26 ಮಾರ್ಚ್ 2023, 19:30 IST
ನಗರದಲ್ಲಿ ಭಾನುವಾರ ನಡೆದ ಗೌರವ ವಂದನೆ, ಆತ್ಮಕಥೆ ಹಾಗೂ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಗಾಯಕಿ ಎಚ್.ಆರ್‌.ಲೀಲಾವತಿ (ಎಡದಿಂದ ಮೂರನೆಯವರು) ಅವರನ್ನು (ಎಡದಿಂದ) ಎಂ.ಆರ್.ಕಮಲಾ, ಸಾಹಿತಿ ದೊಡ್ಡರಂಗೇಗೌಡ, ಕವಿ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್‌, ಜಯಂತ್ ಕಾಯ್ಕಿಣಿ ಅಭಿನಂದಿಸಿದರು  –ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ನಡೆದ ಗೌರವ ವಂದನೆ, ಆತ್ಮಕಥೆ ಹಾಗೂ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಗಾಯಕಿ ಎಚ್.ಆರ್‌.ಲೀಲಾವತಿ (ಎಡದಿಂದ ಮೂರನೆಯವರು) ಅವರನ್ನು (ಎಡದಿಂದ) ಎಂ.ಆರ್.ಕಮಲಾ, ಸಾಹಿತಿ ದೊಡ್ಡರಂಗೇಗೌಡ, ಕವಿ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್‌, ಜಯಂತ್ ಕಾಯ್ಕಿಣಿ ಅಭಿನಂದಿಸಿದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಲಾವಿದರಿಗೂ ಕಷ್ಟಗಳಿರುತ್ತವೆ. ಅದನ್ನು ಮರೆಯಾಗಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಸಂತಸ ತರುವುದೇ ಕಲಾವಿದನ ದೊಡ್ಡ ಗುಣ’ ಎಂದು ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಸುಗಮ ಸಂಗೀತ ಗಾಯಕಿ ಎಚ್‌.ಆರ್‌.ಲೀಲಾವತಿ–90 ಕಾರ್ಯಕ್ರಮದಲ್ಲಿ ಅವರ ‘ಹಾಡಾಗಿ ಹರಿದಾಳೆ’ ಆತ್ಮಕಥೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಗಾಯಕಿ ಎಚ್‌.ಆರ್‌. ಲೀಲಾವತಿ ಅವರು ಮುಳ್ಳು ಬೇಲಿಯಲ್ಲಿ ಅರಳಿದ ಮಲ್ಲಿಗೆಯ ಹೂವು ಎಂಬ ಮಾತು ಸತ್ಯ. ಅವರು ನಡೆದುಬಂದ ದಾರಿ ಅವಲೋಕಿಸಿದರೆ, ನಿಷ್ಠುರವಾದ ಕೆಂಡದ ಹಾಸಿಗೆ ಎಂಬುದು ಅರಿವಿಗೆ ಬರಲಿದೆ’ ಎಂದರು.

ADVERTISEMENT

‘ಯಾರು ಅವರನ್ನು ಕೈಹಿಡಿದು ನಡೆಸಬೇಕಿತ್ತೋ ಅಂತಹ ಗುರುವೇ ಅವರ ಪಾಲಿಗೆ ಮುಳುವಾಗಿದ್ದರು. ಎಲ್ಲ ಹಿಂಸೆ, ಅವಮಾನ ಸಹಿಸಿಕೊಂಡೇ ಲೀಲಾವತಿ ಸಾಧನೆ ಮಾಡಿದವರು. ಗಾಯನದ ಮಾಧುರ್ಯ ಗಮನಿ
ಸಿದರೆ ಅವರ ಬದುಕಿನ ಹಿಂದೆ ಈ ರೀತಿಯ ಅಗ್ನಿಕುಂಡವಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಕಣ್ಣೀರು ಹಾಕದೇ ಸಂಗೀತಲೋಕದಲ್ಲಿ ಸಾಧನೆ ತೋರಿದರು’ ಎಂದು ಪ್ರಶಂಸಿದರು.

‘ಲೀಲಾವತಿ ಕನ್ನಡ ಅಸ್ಮಿತೆಗಳಲ್ಲಿ ಒಬ್ಬರು. ಸುಗಮ ಸಂಗೀತದ ಆರಂಭವು ಟಿ.ಕಾಳಿಂಗರಾಯರು, ಬಾಳಪ್ಪ ಹುಕ್ಕೇರಿ ಅವರಿಂದ ಆಗಿತ್ತು. ಇದಕ್ಕೆ ತಾತ್ವಿಕ ತಳಹದಿ ಕಲ್ಪಿಸಿದವರು ಲೀಲಾವತಿ’ ಎಂದು ಬಣ್ಣಿಸಿದರು.

‘ಲೀಲಾವತಿ ಅವರು ಆಕಾಶವಾಣಿ ಹಾಗೂ ತಮ್ಮ ಸಂಗೀತ ಕಛೇರಿಗಳಲ್ಲಿ ಶಿಸ್ತು ತಂದಿದ್ದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಮ್ಮ ಗಾಯಕರೂ ಸಾಗಿದರು. ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ, ಅಶ್ವತ್ಥ್‌ ಮೊದಲಾದವರು ತಮ್ಮ ಕಛೇರಿಗಳಲ್ಲಿ ಭಾವಗೀತೆ
ಬಿಟ್ಟು ಬೇರೆ ಹಾಡಲಿಲ್ಲ. ಈ ಪರಂಪರೆಯ ಆದಿಬಿಂದು ಲೀಲಾವತಿ. ಸುಗಮ ಸಂಗೀತಕ್ಕೆ ಮೇಲ್ಪಕ್ತಿ
ಹಾಕಿಕೊಟ್ಟಿದ್ದರು’ ಎಂದು ಅವರು ಹೇಳಿದರು.

ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿದ ನಿರ್ದೇಶಕ ಟಿ.ಎನ್‌.ಸೀತಾರಾಂ ಮಾತನಾಡಿ, ‘ಲೀಲಾವತಿ ಅವರ ಗಾಯನಕ್ಕೆ ಕುವೆಂಪು ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಲೀಲಾವತಿ ಅವರ ಹಾಡುಗಳು ಬಾಳಿನ ಪುಟಗಳಿಗೆ ನೇರವಾಗಿ ನಮ್ಮನ್ನು ಕರೆದೊಯ್ಯುತ್ತವೆ’ ಎಂದು ಹೇಳಿದರು.

ವಿಕಾಸ ಪ್ರಕಾಶನದ ಆರ್‌.ಪೂರ್ಣಿಮಾ, ‘ಲೀಲಾವತಿ ಧೈರ್ಯದಿಂದ ತಮ್ಮ ಜೀವನದಲ್ಲಿ ಆದ ಬದುಕಿನ ಕಥನ ಹೇಳಿಕೊಂಡಿದ್ದಾರೆ. ಅವರದ್ದು ಮಾದರಿ ವ್ಯಕ್ತಿತ್ವ’ ಎಂದು ಹೇಳಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ವಚನಸಿರಿ ಕೃತಿ ಹಾಗೂ ಶ್ರೀರಾಘವೇಂದ್ರ ಲೀಲೆ ಭಾವಗೀತೆಗಳ ಸಿ.ಡಿ ಬಿಡುಗಡೆ ಮಾಡಿದರು.

ಎಚ್‌.ಆರ್‌.ಲೀಲಾವತಿ ಸಮ್ಮುಖದಲ್ಲಿ ರಾಗಭಾವ, ವೃಂದಗಾನ, ಕವಿ ಲೀಲಾ, ಕವಿ ಕಾವ್ಯ ಗಾಯನ ಹಾಗೂ ಗುರು ವಂದನೆ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.