ADVERTISEMENT

ಉದ್ಯೋಗಿಗಳಿಗೆ ಕಾರ್ಮಿಕ ಕಾಯ್ದೆಯ ಅರಿವಿರಲಿ: ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:25 IST
Last Updated 16 ಏಪ್ರಿಲ್ 2025, 16:25 IST
ಸಮ್ಮೇಳನದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಮಾತನಾಡಿದರು.
ಸಮ್ಮೇಳನದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಮಾತನಾಡಿದರು.   

ಕೆಂಗೇರಿ: 'ಪ್ರಸಕ್ತವಿರುವ ಔದ್ಯಮಿಕ ನೀತಿಗಳು ಉದ್ಯಮ ಹಾಗೂ ಕಾರ್ಮಿಕರ ನಡುವಿನ ಕಂದಕವನ್ನು ಹೆಚ್ಚಿಸುತ್ತಿವೆ’ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರವಿಂದ ಕುಮಾರ್ ಅಭಿಪ್ರಾಯಪಟ್ಟರು.

ಕೆಎಲ್ಇ ಕಾನೂನು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ಸಾಂವಿಧಾನಿಕ ತತ್ವಶಾಸ್ತ್ರ ಹಾಗೂ ಬದಲಾಗುತ್ತಿರುವ ಕೈಗಾರಿಕಾ ಸಂಬಂಧಗಳು ಕುರಿತ ರಾಷ್ಟ್ರಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾಗುತ್ತಿರುವ ಆರ್ಥಿಕ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳು ಕಾರ್ಮಿಕ ಕಾಯ್ದೆಗಳ ಅರಿವು ಹೊಂದಿರಬೇಕು. ಔದ್ಯೋಗಿಕ ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳುವ ಜ್ಞಾನ ದಕ್ಕಿಸಿಕೊಳ್ಳಬೇಕು ಎಂದರು. ಇಂತಹ ಶೈಕ್ಷಣಿಕ ಸಮ್ಮೇಳನಗಳು ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗಲಿ ಎಂದು ಆಶಿಸಿದರು.

ADVERTISEMENT

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಮುಖ್ಯಸ್ಥ ಪ್ರೊ ಸಿ.ಎಸ್.ಪಾಟೀಲ್ ಮಾತನಾಡಿ ‘ನವ-ಉದಾರೀಕರಣದ ಹಿಡಿತದಲ್ಲಿರುವ ಜಗತ್ತಿನಲ್ಲಿ ಕಾರ್ಮಿಕರ ಹಿತಾಸಕ್ತಿಗೆ ಮಾರಕವಾಗುವ ಹಲವಾರು ಬದಲಾವಣೆಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಿದ್ದೇವೆ. ಇವುಗಳಿಗೆ ಕಾನೂನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳುವ ಅನಿವಾರ್ಯತೆಯಿದೆ‘ ಎಂದು ಹೇಳಿದರು‌. ಸಮ್ಮೇಳನದಲ್ಲಿ 25ಕ್ಕೂ ಹೆಚ್ಚು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. 80 ಸಂಶೋಧನಾ ಕೃತಿಗಳು ಮಂಡನೆಯಾದವು.

ಹಿರಿಯ ವಕೀಲರಾದ ಪ್ರಭುಲಿಂಗ ನಾವದಗಿ, ಅರುಣಾ ಶ್ಯಾಮ್, ಎಸ್.ಎನ್.ಮೂರ್ತಿ, ಪ್ರೊ.ಬಾಬು ಹಾಗೂ ಪ್ರಾಂಶುಪಾಲ ಪ್ರೊ. ಜೆ. ಎಂ.ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.