ADVERTISEMENT

ಅನುಮಾನ, ಅವಮಾನ ಸಹಿಸದೆ ಉಗ್ರನಾಗಲು ಹೊರಟಿದ್ದೆ: ಶಂಕಿತ ಉಗ್ರ ಅಖ್ತರ್ ಹುಸೇನ್

ಶಂಕಿತ ಉಗ್ರರ ಬಂಧನ ಪ್ರಕರಣ l ಹೇಳಿಕೆ ಪಡೆದ ತನಿಖಾ ಸಂಸ್ಥೆಗಳು

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 23:43 IST
Last Updated 28 ಜುಲೈ 2022, 23:43 IST
ಅಖ್ತರ್ ಹುಸೇನ್ ಲಷ್ಕರ್
ಅಖ್ತರ್ ಹುಸೇನ್ ಲಷ್ಕರ್   

ಬೆಂಗಳೂರು: ಅಲ್‌ಕೈದಾ ಉಗ್ರ ಸಂಘಟನೆ ಸೇರಲು ಅಫ್ಗಾನಿಸ್ತಾನಕ್ಕೆ ಹೊರಟಿದ್ದ ಇಬ್ಬರು ಶಂಕಿತ ಉಗ್ರರ ವಿಚಾರಣೆ ಮುಂದುವರಿಸಿರುವ ನಗರದ ಸಿಸಿಬಿ ಹಾಗೂ ರಾಜ್ಯ ಗುಪ್ತದಳದ ಅಧಿಕಾರಿಗಳು, ವಿಡಿಯೊ ಚಿತ್ರೀಕರಣ ಸಮೇತ ಇಬ್ಬರಿಂದಲೂ ಹೇಳಿಕೆ ಪಡೆದುಕೊಂಡಿದ್ದಾರೆ.

‘ಬೆಂಗಳೂರಿನ ತಿಲಕ್‌ನಗರದಲ್ಲಿ ಜುಲೈ 24ರಂದು ಬಂಧಿಸಲಾಗಿರುವ ಅಖ್ತರ್ ಹುಸೇನ್ ಲಷ್ಕರ್ (24) ಹಾಗೂ ತಮಿಳುನಾಡಿನ ಸೇಲಂನಲ್ಲಿ ಸಿಕ್ಕಿಬಿದ್ದಿರುವ ಅಬ್ದುಲ್ ಅಲೀಂ ಮಂಡಲ್ ಅಲಿಯಾಸ್ ಜುಬಾನನ್ನು (23) ವಿಚಾರಣೆ ಒಳಪಡಿಸಲಾಗುತ್ತಿದೆ. ಈಗಾಗಲೇ ಇವರಿಂದ ಹೇಳಿಕೆಯೊಂದನ್ನು ಪಡೆಯಲಾಗಿದ್ದು, ಪರಿಶೀಲನೆ ನಡೆದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಸ್ಸಾಂ ಹಾಗೂ ಹಿಂದಿ ಭಾಷೆಯಲ್ಲಿ ಶಂಕಿತರು ಹೇಳಿಕೆ ನೀಡಿದ್ದು, ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸಲಾಗಿದೆ. ಇದನ್ನೇ ನ್ಯಾಯಾಲಯಕ್ಕೂ ಸಲ್ಲಿಸಲಾಗುವುದು’ ಎಂದು ತಿಳಿಸಿವೆ.

ADVERTISEMENT

ಅಖ್ತರ್ ಹುಸೇನ್ ಹೇಳಿಕೆಯಲ್ಲಿ ಏನಿದೆ?: ‘ಬಾಲ್ಯದಿಂದಲೂ ಧರ್ಮದ ಬಗ್ಗೆ ಅಭಿಮಾನವಿತ್ತು. ಧರ್ಮದ ಪ್ರತಿಯೊಂದು ಸಂದೇಶವನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದೆ. ಧರ್ಮದ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರೆ, ಕೋಪ ಬರುತ್ತಿತ್ತು. ಮಾತಿನ ಮೂಲಕವೇ ಆಕ್ರೋಶ ವ್ಯಕ್ತಪಡಿಸುತ್ತಿದೆ’ ಎಂಬುದಾಗಿ ಅಖ್ತರ್ ಹುಸೇನ್ ಹೇಳಿರುವುದಾಗಿ ಮೂಲಗಳು ಹೇಳಿವೆ.

‘ಬೆಂಗಳೂರಿಗೆ ಬಂದ ನಂತರವೂ ಧರ್ಮ ಪಾಲಿಸುತ್ತಿದ್ದೆ. ಗಡ್ಡ ಬಿಟ್ಟು, ನಿತ್ಯವೂ ಪ್ರಾರ್ಥನೆ ಸಲ್ಲಿಸುತ್ತಿದ್ದೆ. ಕೆಲಸಕ್ಕಾಗಿ ಹುಡುಕಾಡುವಾಗ, ನನ್ನ ಭಾಷೆ ಹಾಗೂ ಗಡ್ಡ ನೋಡಿ ಯಾರೂ ಕೆಲಸ ಕೊಡಲಿಲ್ಲ. ಎಲ್ಲರೂ ಅನುಮಾನದಿಂದ ನೋಡಿದರು. ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾದಾಗ, ಸ್ನೇಹಿತರೊಬ್ಬರ ಮೂಲಕ ಜೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿದ್ದೆ. ನಂತರ, ತಿಲಕ್‌ನಗರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದೆ.’

‘ತಮ್ಮನನ್ನೂ ನಗರಕ್ಕೆ ಕರೆಸಿಕೊಂಡು ಆತನಿಗೂ ಕೆಲಸ ಕೊಡಿಸಿದ್ದೆ. ಇಬ್ಬರೂ ದುಡಿದು ಊರಿಗೂ ಹಣ ಕಳುಹಿಸುತ್ತಿದ್ದೆವು. ಆಹಾರ ಪೂರೈಕೆ ಮಾಡಲು ಹೋದಾಗ, ನನ್ನ ಗಡ್ಡ ನೋಡಿ ಗ್ರಾಹಕರು ಸಂಶಯ ಪಡುತ್ತಿದ್ದರು. ಕೆಲವರು, ನನ್ನ ಕೈಯಿಂದ ಆಹಾರ ಪೊಟ್ಟಣ ತೆಗೆದುಕೊಳ್ಳಲು ನಿರಾಕರಿಸಿದರು. ಇಷ್ಟೆಲ್ಲ ಅನುಭವಿಸಿದ ನಂತರ, ನನ್ನ ಆಕ್ರೋಶ ಮತ್ತಷ್ಟು ಹೆಚ್ಚಾಯಿತು’ ಎಂದು ಅಖ್ತರ್ ತಿಳಿಸಿರುವುದಾಗಿ ಮೂಲಗಳು ವಿವರಿಸಿವೆ.

‘ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಯಿತು, ಮುಸ್ಲಿಂ ಬಳಿ ವ್ಯಾಪಾರ ಮಾಡಬೇಡಿ ಎಂಬ ಅಭಿಯಾನ ಶುರುವಾಯಿತು, ಹಿಜಾಬ್‌ ವಿಚಾರದಲ್ಲೂ ಅನ್ಯಾಯ ಆಯಿತು. ಇದರ ವಿರುದ್ಧ ಆಕ್ರೋಶ ಹೊರಹಾಕಲು, ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ ತೆರೆದೆ. ದೇಶದ ವಿರುದ್ಧವಾಗಿ ಪ್ರಚೋದನಕಾರಿ ಪೋಸ್ಟ್ ಪ್ರಕಟಿಸುತ್ತಿದ್ದೆ. ನನ್ನ ಪೋಸ್ಟ್‌ಗೆ ಕಾಮೆಂಟ್‌ ಮಾಡುತ್ತಿದ್ದ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರ ಮೂಲಕ ಅಲ್‌ಕೈದಾ ಉಗ್ರರು ಪರಿಚಿತರಾದರು. ಹಲವು ಇ–ಬುಕ್‌ಗಳನ್ನು ಕಳುಹಿಸಿದರು. ವೇತನ ಹಾಗೂ ಎಲ್ಲ ಸೌಕರ್ಯ ಕಲ್ಪಿಸುವುದಾಗಿಯೂ ಹೇಳಿದರು. ವ್ಯವಸ್ಥೆಯಿಂದ ಬೇಸತ್ತಿದ್ದ ನಾನು, ಉಗ್ರನಾಗಲು ತೀರ್ಮಾನಿಸಿ ಅಫ್ಗಾನಿಸ್ತಾನ್‌ಗೆ ಹೋಗಲು ಸಿದ್ಧವಾಗಿದ್ದೆ’ ಎಂದೂ ಅಖ್ತರ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಅಸ್ಸಾಂ, ಪಶ್ಚಿಮ ಬಂಗಾಳಕ್ಕೆ ವಿಶೇಷ ತಂಡ

‘ಶಂಕಿತರ ಬಗ್ಗೆ ಮಾಹಿತಿ ಕಲೆಹಾಕಲೆಂದು ರಾಜ್ಯ ವಿಶೇಷ ತಂಡದ ಅಧಿಕಾರಿಗಳು, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅಲ್ಲಾಹನ ಸರ್ಕಾರ ತರಲು ನನ್ನ ಬಲಿ’

‘ಪ್ರವಾದಿಗಳ ಸಂದೇಶ ಪಾಲಿಸುವುದು ನಮ್ಮ ಆದ್ಯ ಕರ್ತವ್ಯ. ಭಾರತ ಹಾಗೂ ಎಲ್ಲ ದೇಶಗಳಲ್ಲಿ ಅಲ್ಲಾಹನ ಸರ್ಕಾರ ಬರಬೇಕು. ಅದಕ್ಕಾಗಿ ನಾನು ಬಲಿಯಾಗಲೂ ಸಿದ್ಧನಿರುವುದಾಗಿ ಅಲ್‌ಕೈದಾ ಉಗ್ರರಿಗೆ ಹೇಳಿದ್ದೆ. ನನ್ನನ್ನು ನೇಮಕ ಮಾಡಿಕೊಂಡು ತರಬೇತಿ ನೀಡುವುದಾಗಿ ಉಗ್ರರು ತಿಳಿಸಿದ್ದರು’ ಎಂದೂ ಅಖ್ತರ್ ವಿಚಾರಣೆಯಲ್ಲಿ ಹೇಳಿರುವುದಾಗಿ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.