
ಬೆಂಗಳೂರು: ಮಹಾರಾಷ್ಟ್ರದ ಮಾದಕವಸ್ತು ನಿಗ್ರಹ ಕಾರ್ಯಪಡೆಯ (ಎಎನ್‌ಟಿಎಫ್) ಪೊಲೀಸರು, ಬೆಂಗಳೂರಿನ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ₹55.88 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಬೆನ್ನಲ್ಲೇ ಕರ್ತವ್ಯ ಲೋಪದ ಆರೋಪದಲ್ಲಿ ನಗರದ ಮೂವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ತಲೆದಂಡವಾಗಿದೆ.
ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ವಿಫಲರಾದ ಹಾಗೂ ಮಾಹಿತಿ ತಿಳಿದಿದ್ದರೂ ಡ್ರಗ್ಸ್ ತಯಾರಿಕಾ ಕಾರ್ಖಾನೆಗಳ ಮೇಲೆ ದಾಳಿ ನಡೆಸದೇ ಕರ್ತವ್ಯಲೋಪ ಎಸಗಿದ್ದ ಆರೋಪದ ಮೇರೆಗೆ ಕೊತ್ತನೂರು ಠಾಣೆಯ ಇನ್‌ಸ್ಪೆಕ್ಟರ್ ಚೇತನ್‌ಕುಮಾರ್, ಬಾಗಲೂರು ಠಾಣೆಯ ಇನ್‌ಸ್ಪೆಕ್ಟರ್ ಶಬರೀಶ್, ಅವಲಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಸೋಮವಾರ ಆದೇಶಿಸಿದ್ದಾರೆ. ಮೂವರ ವಿರುದ್ಧ ಇಲಾಖೆ ತನಿಖೆಗೂ ಆದೇಶಿಸಲಾಗಿದೆ.
ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆರ್.ವೆಂಕಟೇಶ್ ಅವರಿಗೆ ಬಾಗಲೂರು, ಕೆ.ಆರ್. ಪುರ ಠಾಣೆಯ ಬಿ.ರಾಮಮೂರ್ತಿ ಅವರಿಗೆ ಅವಲಹಳ್ಳಿ, ಸಂಪಿಗೆಹಳ್ಳಿ ಠಾಣೆಯ ಎಂ.ಚಂದ್ರಶೇಖರ್‌ಗೆ ಕೊತ್ತನೂರು ಪೊಲೀಸ್ ಠಾಣೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.