ADVERTISEMENT

ಅಕ್ಕ– ತಂಗಿ ಅನುಮಾನಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 20:32 IST
Last Updated 15 ಏಪ್ರಿಲ್ 2021, 20:32 IST

ಬೆಂಗಳೂರು: ಮಾಗಡಿ ರಸ್ತೆ ಬಳಿಯ ಗೋಪಾಲಪುರ 3ನೇ ಅಡ್ಡರಸ್ತೆ ಮನೆಯೊಂದರಲ್ಲಿ ಅಕ್ಕ– ತಂಗಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಅವರಿಬ್ಬರ ಮೃತದೇಹಗಳು ಗುರುವಾರ ಪತ್ತೆಯಾಗಿವೆ.

‘ಸ್ಥಳೀಯ ನಿವಾಸಿ ಜಮುನಾ (60) ಹಾಗೂ ರಾಣಿ (58) ಮೃತರು. ಅವಿವಾಹಿತೆಯರಾಗಿದ್ದ ಅವರಿಬ್ಬರು, ಒಟ್ಟಿಗೆ ವಾಸವಿದ್ದರು. ಅವರಿಬ್ಬರ ತಂಗಿ ಪ್ರೇಮಾ ಚಾಮರಾಜಪೇಟೆಯಲ್ಲಿ ನೆಲೆಸಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಅಕ್ಕಂದಿರಿಗೆ ಸೋಮವಾರ ಕರೆ ಮಾಡಿದ್ದ ಪ್ರೇಮಾ, ಕೆಲ ಸಮಯ ಮಾತನಾಡಿದ್ದರು. ಬುಧವಾರ ಕರೆ ಮಾಡಿದರೂ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಅನುಮಾನಗೊಂಡಿದ್ದ ಪ್ರೇಮಾ, ತಮ್ಮ ಪತಿ ಜೊತೆ ಗುರುವಾರ ಮನೆಗೆ ಬಂದಿದ್ದರು. ಬಾಗಿಲು ಒಳಗಿನಿಂದ ಲಾಕ್‌ ಮಾಡಲಾಗಿತ್ತು. ಸ್ಥಳೀಯರ ನೆರವಿನಿಂದ ಬಾಗಿಲ ಲಾಕ್‌ ಮುರಿದು ನೋಡಿದಾಗ ಮೃತದೇಹಗಳು ಕಂಡಿವೆ’ ಎಂದೂ ತಿಳಿಸಿದರು.

ADVERTISEMENT

ಮೃತದೇಹ ಪಕ್ಕವೇ ಊಟದ ಪಾತ್ರೆಗಳು: ‘ಮೃತದೇಹವಿದ್ದ ಸ್ಥಳದಲ್ಲೇ ಊಟದ ಪಾತ್ರೆಗಳು ಬಿದ್ದಿವೆ. ಇಬ್ಬರೂ ಊಟ ಮಾಡಿದ ನಂತರ ಮೃತಪಟ್ಟಿರುವ ಅನುಮಾನವಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಇತರೆ ವಸ್ತುಗಳು ಇದ್ದಲ್ಲೇ ಇವೆ. ಇವರಿಬ್ಬರ ಸಾವಿನಲ್ಲಿ ಸಾಕಷ್ಟು ಅನುಮಾನಗಳು ಇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.