ADVERTISEMENT

ಬಡತನ ನಿವಾರಣೆ ವಿದ್ಯಾವಂತರ ಕರ್ತವ್ಯ: ಡಾ.ನಿರಂಜನ ವಾನಳ್ಳಿ

ವಿವೇಕಾನಂದ ಜಯಂತಿ: 'ಬಿ ಗುಡ್‌ ಡು ಗುಡ್‌' ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 20:25 IST
Last Updated 12 ಜನವರಿ 2023, 20:25 IST
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ಬಿ ಗುಡ್‌, ಡು ಗುಡ್‌’ ಅಭಿಯಾನಕ್ಕೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ನಾ.‌ ತಿಪ್ಪೇಸ್ವಾಮಿ, ನಿರಂಜನ ವಾನಳ್ಳಿ ಇದ್ದರು – ಪ್ರಜಾವಾಣಿ ಚಿತ್ರ
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ಬಿ ಗುಡ್‌, ಡು ಗುಡ್‌’ ಅಭಿಯಾನಕ್ಕೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ನಾ.‌ ತಿಪ್ಪೇಸ್ವಾಮಿ, ನಿರಂಜನ ವಾನಳ್ಳಿ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಸ್ವಾಮಿ ವಿವೇಕಾನಂದರು ಹೇಳಿದಂತೆ ಉಪಕಾರಿ ನಾಗರಿಕರನ್ನು ಸೃಷ್ಟಿಸುವುದೇ ಶಿಕ್ಷಣದ ಧ್ಯೇಯ. ಬಡತನ ನೀಗಿಸುವುದೇ ವಿದ್ಯಾವಂತರ ಕರ್ತವ್ಯ. ಆದರೆ, ಭಾರತದಲ್ಲಿ ವಿದ್ಯಾವಂತರೇ ಬಡತನದಲ್ಲಿದ್ದಾರೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ವಾನಳ್ಳಿ ಹೇಳಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಸಮರ್ಥ ಭಾರತ ಗುರುವಾರ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ 'ಬಿ ಗುಡ್‌ ಡು ಗುಡ್‌ - 2023' ಅಭಿಯಾನದಲ್ಲಿ ಮಾತನಾಡಿದ ಅವರು, ‘ವಿವೇಕಾನಂದರು ಅಂದು ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ್ದು ಕೆಲವು ನಿಮಿಷವಾದರೂ, ಇಂದಿಗೂ ಪ್ರತಿಯೊಬ್ಬರ ಹೃದಯದಲ್ಲಿದ್ದಾರೆ. ದೇಶದ ಬಡತನ ನೀಗಿದಾಗಷ್ಟೇ ಓದಿದವರನ್ನು ವಿದ್ಯಾವಂತರೆಂದು ಪರಿಗಣಿಸಬಹುದು. ಈ ಪರಿಸ್ಥಿತಿ ಬದಲಾಗಬೇಕಾದರೆ ಇಂಡಿಯಾ ‘ಭಾರತ’ವಾಗಬೇಕು. ಮಣ್ಣಿನ ಸಂಸ್ಕೃತಿ ಗೌರವಿಸುವುದು ನಿಜವಾದ ಶ್ರೀಮಂತಿಕೆ. ನಮ್ಮ ಸಂಸ್ಕೃತಿ ಉಳಿಸುವ ಮೂಲಕ ಸಮರ್ಥ, ಸಶಕ್ತ ಬಹುತ್ವ ಭಾರತ ನಿರ್ಮಿಸಬೇಕಿದೆ ಎಂದರು.

ಅಭಿಯಾನ ಉದ್ಘಾಟಿಸಿದ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಗತ್ತನ್ನು ಕಾಪಾಡಬಲ್ಲ ಸಾಮರ್ಥ್ಯ ಭಾರತಕ್ಕಿದೆ. ರಷ್ಯಾ-ಉಕ್ರೇನ್‌ ಯುದ್ಧದ ಸನ್ನಿವೇಶಗಳು, ಕೋವಿಡ್‌ ಕಾಲಘಟ್ಟ ಭಾರತ ಜಗತ್ತನ್ನು ಕಾಪಾಡಬಲ್ಲದೆನ್ನುವ ಮನೋಭಾವ ಮೂಡಿಸಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಮರ್ಥ ಭಾರತದ ಪ್ರಧಾನ ಮಾರ್ಗದರ್ಶಕ ನಾ.ತಿಪ್ಪೇಸ್ವಾಮಿ,ಭಾರತ ತನ್ನ ಅಸ್ಮಿತೆ ಕಳೆದುಕೊಂಡು ಗುಲಾಮಗಿರಿ ಯಲ್ಲಿದ್ದಾಗ ವಿವೇಕಾನಂದರು ಯುವಕರಲ್ಲಿ ಜಾಗೃತಿ ಮೂಡಿ ಸಿದರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಯುವಕರು ಸಂಕಷ್ಟದಲ್ಲಿರುವ ಜನರಿಗೆ ದನಿಯಾಗುವ ಮೂಲಕ ಉಪಕಾರಿಯಾಗಬೇಕು ಎಂದರು.

ಸಮರ್ಥ ಭಾರತದ ವಿಶ್ವಸ್ಥ ರಾಜೇಶ್‌ ಪದ್ಮಾರ್‌, ಬೆಂಗಳೂರು ನಗರ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ನರಸಿಂಹ ಮೂರ್ತಿ, ಇತಿಹಾಸ ವಿಭಾಗದ ಅಧ್ಯಾಪಕಿ ಮಾಲಿನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.