ADVERTISEMENT

‘ಮೇ 17’ ಚಳವಳಿ ರೂವಾರಿ ತಿರುಮುರುಗನ್ ಸೆರೆ

ತಮಿಳುನಾಡು ಪೊಲೀಸರ ವಶಕ್ಕೆ ಒಪ್ಪಿಸಿದ ಕೆಐಎಎಲ್ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2018, 19:30 IST
Last Updated 9 ಆಗಸ್ಟ್ 2018, 19:30 IST
ತಿರುಮುರುಗನ್ ಗಾಂಧಿ
ತಿರುಮುರುಗನ್ ಗಾಂಧಿ   

ಬೆಂಗಳೂರು: ತಮಿಳುನಾಡಿನ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ‘ಮೇ 17’ ಚಳವಳಿಯ ರೂವಾರಿ ತಿರುಮುರುಗನ್ ಗಾಂಧಿ ಅವರನ್ನು ಪೊಲೀಸರು ರಾಜದ್ರೋಹದ (ಐಪಿಸಿ 124ಎ) ಆರೋಪದಡಿ ಗುರುವಾರ ಬೆಳಿಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಬಂಧಿಸಿದ್ದಾರೆ.

‘ಬೆಳಿಗ್ಗೆ 5.30ರ ಸುಮಾರಿಗೆ ಜರ್ಮನಿಯಿಂದ ಕೆಐಎಎಲ್‌ಗೆ ಬಂದಿಳಿದ ತಿರುಮುರುಗನ್ ಅವರನ್ನು ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದು ನಮ್ಮ ಸುಪರ್ದಿಗೆ ಒಪ್ಪಿಸಿದರು. ಮಧ್ಯಾಹ್ನ ತಮಿಳುನಾಡು ಪೊಲೀಸರು ಬಂದು ಅವರನ್ನು ಕರೆದುಕೊಂಡು ಹೋದರು’ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಿರುಮುರುಗನ್ ಯಾರು?: 2009ರಲ್ಲಿ ನಡೆದ ಎಲ್‌ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ) ಹಾಗೂ ಶ್ರೀಲಂಕಾ ನಡುವಿನ ಸಂಘರ್ಷದಲ್ಲಿ ತಿರುಮುರುಗನ್ ತಮಿಳು ಈಳಂ ಬಂಡುಕೋರರ ಪರ ನಿಂತಿದ್ದರು. ಈ ಘರ್ಷಣೆಯಲ್ಲಿ ಸಾವಿರಾರು ಬಂಡುಕೋರರು ಮೃತಪಟ್ಟರು. ಮೇ 17ರಂದು ಎಲ್‌ಟಿಟಿಇ ಸೋಲನ್ನು ಒಪ್ಪಿಕೊಂಡಿತು. ಆಗ ‘ಮೇ 17’ ಹೆಸರಿನಲ್ಲಿ ಚಳವಳಿ ಹುಟ್ಟುಹಾಕಿದ ತಿರುಮುರುಗನ್, ತಮಿಳರ ಪರ ಹೋರಾಟ ಮುಂದುವರಿಸಿದ್ದರು ಎನ್ನಲಾಗಿದೆ.

ADVERTISEMENT

ತೂತುಕುಡಿಯ ‘ಸ್ಟರ್‌ಲೈಟ್ ತಾಮ್ರ ಸಂಸ್ಕರಣಾ ಘಟಕ’ ಮುಚ್ಚುವಂತೆ ಆಗ್ರಹಿಸಿ ತಿರುಮುಗನ್ ನೇತೃತ್ವದಲ್ಲಿ ಸಾವಿರಾರು ರೈತರು ಇದೇ ಫೆಬ್ರುವರಿಯಿಂದ ಅನಿರ್ಧಿಷ್ಟಾವಧಿ ಹೋರಾಟ ನಡೆಸುತ್ತಿದ್ದರು. ಮೇ 20ರಂದು ಆ ಹೋರಾಟ ಹಿಂಸಾರೂಪಕ್ಕೆ ತಿರುಗಿತು. ಪೊಲೀಸರು ನಡೆಸಿದ ಗೋಲಿಬಾರ್‌ನಿಂದ 13 ಪ್ರತಿಭಟನಾಕಾರರು ಮೃತಪಟ್ಟು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಈ ಸಂಬಂಧ ತಿರುಮುರುಗನ್ ವಿರುದ್ಧ ಮಹಿಳಾಪುರ ಠಾಣೆಯಲ್ಲಿ 22 ಪ್ರಕರಣಗಳು ದಾಖಲಾಗಿದ್ದವು. ಅವರ ವಿರುದ್ಧ ಗೂಂಡಾ ಅಸ್ತ್ರವನ್ನೂ ಪ್ರಯೋಗಿಸಲಾಗಿತ್ತು. ಅಂದಿನಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ತಿರುಮುರುಗನ್‌ ಮೇಲೆ ಲುಕ್ಔಟ್ ನೋಟಿಸ್ ಸಹ ಜಾರಿಯಾಗಿತ್ತು.

ಸೆರೆಸಿಕ್ಕಿದ್ದು ಹೀಗೆ

ವಿಶ್ವಸಂಸ್ಥೆಯು ಜಿನಿವಾದಲ್ಲಿ ನಡೆಸಿದ ಮಾನವ ಹಕ್ಕುಗಳ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡಿದ್ದ ತಿರುಮುರುಗನ್, ಅಲ್ಲಿಂದ ಗುರುವಾರ ಚೆನ್ನೈಗೆ ಮರಳುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ತಮಿಳುನಾಡು ಪೊಲೀಸರು, ಕೆಐಎಎಲ್ ಹಾಗೂ ಚೆನ್ನೈ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು. ಆ ಸುಳಿವು ಆಧರಿಸಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.