ADVERTISEMENT

ಟಿ.ಸಿ ಹುದ್ದೆ, ಗ್ಯಾಸ್ ಏಜೆನ್ಸಿ ಕೊಡಿಸುವುದಾಗಿ ₹ 60 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 17:22 IST
Last Updated 23 ಜನವರಿ 2021, 17:22 IST

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಟಿಕೆಟ್ ತಪಾಸಣೆಗಾರನ (ಟಿ.ಸಿ) ಹುದ್ದೆ ಹಾಗೂ ಗ್ಯಾಸ್ ಏಜೆನ್ಸಿ ಕೊಡಿಸುವುದಾಗಿ ಹೇಳಿ ₹ 60 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆಗೀಡಾಗಿರುವ ಅಣ್ಣಯ್ಯ ಎಂಬುವರು ದೂರು ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಎನ್ನಲಾದ ಮಹೇಶ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜಯಣ್ಣ ಎಂಬುವರ ಮೂಲಕ ಅಣ್ಣಯ್ಯ ಅವರಿಗೆ ಆರೋಪಿ ಮಹೇಶ್ ಪರಿಚಯವಾಗಿತ್ತು. ರಿಯಲ್‌ ಎಸ್ಟೇಟ್ ವ್ಯವಹಾರ ಮಾಡುವುದಾಗಿ ಹೇಳಿದ್ದ ಆರೋಪಿ, ತಮಗೆ ರಾಜಕೀಯ ವ್ಯಕ್ತಿಗಳು ಹಾಗೂ ಹಿರಿಯ ಅಧಿಕಾರಿಗಳು ಪರಿಚಯವೆಂದು ತಿಳಿಸಿದ್ದ. ಈಗಾಗಲೇ ಹಲವು ಯುವಕರಿಗೆ ರೈಲ್ವೆ ಇಲಾಖೆಯಲ್ಲಿ ಟಿ.ಸಿ ಹುದ್ದೆ ಕೊಡಿಸಿರುವುದಾಗಿಯೂ ಹೇಳಿದ್ದ.’

ADVERTISEMENT

‘ಆರೋಪಿ ಮಾತು ನಂಬಿದ್ದ ಅಣ್ಣಯ್ಯ, ತಮ್ಮ ಮಗ ಹಾಗೂ ತಮ್ಮ ಸಂಬಂಧಿಕರ ಮಕ್ಕಳಿಗೆ ಕೆಲಸ ಕೊಡಿಸಲು ಆರೋಪಿಗೆ ₹ 40 ಲಕ್ಷ ನೀಡಿದ್ದರು. ಅದಾದ ನಂತರ, ಗ್ಯಾಸ್ ಏಜೆನ್ಸಿ ಕೊಡಿಸುವುದಾಗಿ ಹೇಳಿ ಆರೋಪಿ ಪುನಃ ₹ 20 ಲಕ್ಷ ಪಡೆದಿದ್ದ’ ಎಂದೂ ಮೂಲಗಳು ತಿಳಿಸಿವೆ.

‘ಹಣ ಪಡೆದು ಹಲವು ತಿಂಗಳಾದರೂ ಆರೋಪಿ, ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸಿರಲಿಲ್ಲ. ಗ್ಯಾಸ್ ಏಜೆನ್ಸಿ ಬಗ್ಗೆಯೂ ಯಾವುದೇ ಮಾಹಿತಿ ನೀಡಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆರೋಪಿ ತಲೆಮರೆಸಿಕೊಂಡಿದ್ದಾರೆ. ನೊಂದ ಅಣ್ಣಯ್ಯ, ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.