ADVERTISEMENT

ಸಹ ಶಿಕ್ಷಕರ ನೇಮಕಾತಿ ಅಕ್ರಮ: ಬಂಧಿತರ ವಿರುದ್ಧ ‘ಭ್ರಷ್ಟಾಚಾರ’ ಅಸ್ತ್ರ

ಸಿಐಡಿ ತನಿಖೆ ಚುರುಕು

ಸಂತೋಷ ಜಿಗಳಿಕೊಪ್ಪ
Published 25 ಸೆಪ್ಟೆಂಬರ್ 2022, 4:24 IST
Last Updated 25 ಸೆಪ್ಟೆಂಬರ್ 2022, 4:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರೌಢಶಾಲೆಗಳ ಗ್ರೇಡ್–2 ಸಹ ಶಿಕ್ಷಕರ ನೇಮಕಾತಿ ಅಕ್ರಮದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಬಂಧಿತ ಸಹಶಿಕ್ಷಕರು ಹಾಗೂ ಎಫ್‌ಡಿಎ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಸ್ತ್ರ ಪ್ರಯೋಗಿಸಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ 2012–13 ಹಾಗೂ 2014–15ನೇ ಸಾಲಿನಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ (ಪ್ರೌಢ) ಅವರು ವಿಧಾನಸೌಧ ಠಾಣೆಗೆ ಇತ್ತೀಚೆಗಷ್ಟೆ ಪ್ರತ್ಯೇಕ ದೂರು ನೀಡಿದ್ದರು.

ರಾಜ್ಯ ಸರ್ಕಾರದ ಆದೇಶದನ್ವಯ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು, 14 ಸಹಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಕೆ.ಎಸ್. ಪ್ರಸಾದ್ ಅವರನ್ನು ಬಂಧಿಸಿದ್ದಾರೆ.

ADVERTISEMENT

‘ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳು ಸರ್ಕಾರಿ ನೌಕರರು. ಇದೇ ಕಾರಣಕ್ಕೆ ಎಲ್ಲರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ವಿಚಾರಣೆಯು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಈಗಾಗಲೇ ವರ್ಗಾವಣೆ ಆಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ಅಧಿಕಾರಿಗಳು ಭಾಗಿ: ‘ವಿಜಯಪುರ, ಕೋಲಾರ, ತುಮಕೂರು ಸೇರಿ ಹಲವು ಜಿಲ್ಲೆಗಳ ಸಹಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಂಬಂಧಪಟ್ಟಂತೆ ದಾಖಲೆಗಳು ಲಭ್ಯವಾಗಿವೆ. ಇವುಗಳ ಪರಿಶೀಲನೆ ನಡೆಯುತ್ತಿದ್ದು, ಕೃತ್ಯದಲ್ಲಿ ಅಧಿಕಾರಿಗಳೂ ಭಾಗಿಯಾಗಿರುವ ಸಂಶಯ ಬರುತ್ತಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಕೆಲ ಶಾಲೆಗಳ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಉಪನಿರ್ದೇಶಕರು ಹಾಗೂ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳು ಮಧ್ಯವರ್ತಿಗಳಾಗಿ ಕೆಲಸ ಮಾಡಿರುವ ಮಾಹಿತಿ ಇದೆ. ಇದನ್ನು ಆಧರಿಸಿ ಈಗಾಗಲೇ ಹಲವರನ್ನು ವಿಚಾರಣೆ ನಡೆಸಲಾಗಿದೆ. ಆದರೆ, ಅವರ ವಿರುದ್ಧ ಸದ್ಯಕ್ಕೆ ಖಚಿತ ಪುರಾವೆ ಸಿಕ್ಕಿಲ್ಲ’ ಎಂದು ಹೇಳಿವೆ.

‘ಬಂಧಿತ ಸಹಶಿಕ್ಷಕರು, ₹ 5 ಲಕ್ಷದಿಂದ ₹ 10 ಲಕ್ಷ ನೀಡಿ ಅಕ್ರಮವಾಗಿ ನೇಮಕವಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತ ಎಫ್‌ಡಿಎ ಸಹ ಸಾಕಷ್ಟು ಮಾಹಿತಿ ಬಾಯ್ಬಿಟ್ಟಿದ್ದಾನೆ. ಆರೋಪಿಗಳ ಹೇಳಿಕೆಯಲ್ಲಿ ಸಾಕಷ್ಟು ಮಂದಿ ಹೆಸರು ಇದೆ. ಅವರೆಲ್ಲರ ಪಾತ್ರದ ಬಗ್ಗೆ ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಮತ್ತೊಂದು ಎಫ್‌ಐಆರ್: ‘ಸಹಶಿಕ್ಷಕರ ನೇಮಕಾತಿ ಅಕ್ರಮ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಈ ಮೂಲಕ ಮೂರು ಎಫ್‌ಐಆರ್ ದಾಖಲಾಗಿದ್ದು, ಸಿಐಡಿಯ ಪ್ರತ್ಯೇಕ ತಂಡಗಳು ತನಿಖೆ ನಡೆಸುತ್ತಿವೆ’ ಎಂದು ಮೂಲಗಳು ಹೇಳಿವೆ.

‘ಜಿಲ್ಲಾವಾರು ಅಕ್ರಮ ನಡೆದಿರುವುದರಿಂದ ಡಿವೈಎಸ್ಪಿ ನೇತೃತ್ವದಲ್ಲಿ ಜಿಲ್ಲೆಗೊಂದರಂತೆ ತಂಡವನ್ನು ರಚಿಸಲಾಗಿದೆ. ತಂಡದಲ್ಲಿರುವ ಅಧಿಕಾರಿಗಳು ನಿಗದಿತ ಜಿಲ್ಲೆಗಳಲ್ಲಿ ತೆರಳಿ ಮಾಹಿತಿ ಕಲೆಹಾಕುತ್ತಿದ್ದಾರೆ. ಹಲವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.