ADVERTISEMENT

ವೈದ್ಯಕೀಯ ವಿದ್ಯಾರ್ಥಿಗಳಿಗೆ ಯೋಗ ವಿಜ್ಞಾನ ಬೋಧನೆ

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿವಿಯಲ್ಲಿ ಯೋಗ ದಿನಾಚರಣೆ *ಮನೆಯಲ್ಲಿಯೇ ಯೋಗ, ಮನೆಯವರೊಂದಿಗೆ ಯೋಗ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 20:39 IST
Last Updated 21 ಜೂನ್ 2020, 20:39 IST
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌   

ಬೆಂಗಳೂರು: ‘ಯೋಗದ ಮಹತ್ವ ಸಾರಲು ಮತ್ತು ಅದನ್ನು ಹೆಚ್ಚು ಪ್ರಚುರಪಡಿಸಲು ವೈದ್ಯಕೀಯ ವಿದ್ಯಾರ್ಥಿಗಳಿಗೆ ಯೋಗವಿಜ್ಞಾನ ಬೋಧಿಸುವ ಉದ್ದೇಶವಿದ್ದು, ಶೀಘ್ರದಲ್ಲಿಯೇ ಈ ಕುರಿತ ಅಧ್ಯಾಯವನ್ನು ಪಠ್ಯಕ್ರಮದಲ್ಲಿ ಸೇರಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಮನೆಯಲ್ಲಿಯೇ ಯೋಗ, ಮನೆಯವರೊಂದಿಗೆ ಯೋಗ’ ಘೋಷವಾಕ್ಯದಡಿ ವಿಶ್ವವಿದ್ಯಾಲಯದಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಧರ್ಮಗುರುಗಳು ಯೋಗದ ಕುರಿತು ಆನ್‌ಲೈನ್‌ ವಿಡಿಯೊ ಸಂವಾದದಲ್ಲಿ ಸಂದೇಶ ನೀಡಿದರು.

ADVERTISEMENT

ಈಶ ಫೌಂಡೇಷನ್‌ನ ಜಗ್ಗಿ ವಾಸುದೇವ್, ‘ಅಮೆರಿಕದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೇ ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. 2018ರಲ್ಲಿ 380ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. ಒತ್ತಡ ನಿರ್ವಹಿಸಲು, ಇಂತಹ ವಿದ್ಯಾರ್ಥಿಗಳಿಗೆ ಯೋಗವಿಜ್ಞಾನ ಬೋಧಿಸಬೇಕು’ ಎಂದು ಸಲಹೆ ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನಮಠದ ನಿರ್ಮಲಾನಂದನಾಥ ಸ್ವಾಮೀಜಿ, ‘ನಮ್ಮ ಅಸ್ತಿತ್ವದ ವಿವಿಧ ಆಯಾಮಗಳನ್ನು ಯೋಗ ಪರಿಚಯಿಸುತ್ತದೆ. ನಮ್ಮನ್ನು ನಾವು ಅರಿಯುವ ಮಾರ್ಗ ಯೋಗ’ ಎಂದರು.

ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀಶ್ರೀ ರವಿಶಂಕರ್‌ ಗುರೂಜಿ, ‘ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಇದೆಷ್ಟು ಮುಖ್ಯ ಎಂಬುದನ್ನು ಕೋವಿಡ್‌–19 ತೋರಿಸಿಕೊಟ್ಟಿದೆ. ಕೋಪ, ಆಕ್ರಮಣಕಾರಿ ಮನೋಭಾವ, ಖಿನ್ನತೆ ನಿಯಂತ್ರಣಕ್ಕೆ ಯೋಗವೇ ಪರಿಹಾರ’ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.