ADVERTISEMENT

13ನೇ ಮಹಡಿಯಿಂದ ಹಾರಿ ಟೆಕಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 19:33 IST
Last Updated 14 ಫೆಬ್ರುವರಿ 2019, 19:33 IST
ಬರ್ಮನ್
ಬರ್ಮನ್   

ಬೆಂಗಳೂರು: ಬಾಗ್ಮನೆ ಟೆಕ್‌ಪಾರ್ಕ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಗುರುವಾರ ಮಧ್ಯಾಹ್ನ ಕಟ್ಟಡದ 13ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಸ್ಸಾಂನ ಅಮ್ಲನ್ ಬರ್ಮನ್ (31) ಮೃತರು. ‘ಎಂಫಸೈಸ್’ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ ಅವರು, ಮಧ್ಯಾಹ್ನ 1.45ರ ಸುಮಾರಿಗೆ 13ನೇ ಮಹಡಿಯ ಕಾಫಿ ಶಾಪ್‌ಗೆ ಹೋಗಿದ್ದರು. ಅಲ್ಲಿನ ಬಾಲ್ಕನಿಯಿಂದಲೇ ಹಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೇಘಾಲಯ ಹಾಗೂ ಪಶ್ಚಿಮ ಬಂಗಾಳದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಅಮ್ಲನ್, ವರ್ಷದ ಹಿಂದೆ ತಾಯಿ ಶಿಖಾ ಬರ್ಮನ್ ಜತೆ ನಗರಕ್ಕೆ ಬಂದು ಮಹದೇವಪುರದಲ್ಲಿ ನೆಲೆಸಿದ್ದರು. ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ಅವರು, ಅದಕ್ಕೆ ಪರಿಚಿತ ವೈದ್ಯರ ಬಳಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು.

ADVERTISEMENT

‘ಎರಡು ದಿನ ರಜೆ ಪಡೆದಿದ್ದ ಅಮ್ಲನ್, ಎಂದಿನಂತೆ ಗುರುವಾರ ಬೆಳಿಗ್ಗೆ ಕೆಲಸಕ್ಕೆ ಬಂದಿದ್ದ. ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಕರೆದಾಗ, ‘ನನಗೆ ಹಸಿವಿಲ್ಲ. ಕಾಫಿ ಕುಡಿದು ಬರುತ್ತೇನೆ’ ಎಂದು ಕಾಫಿಶಾಪ್‌ಗೆ ಹೋಗಿದ್ದ. ಸೆಕ್ಯುರಿಟಿ ಗಾರ್ಡ್ ಅಲಾರಂ ಒತ್ತಿದಾಗಲೇ ನಮಗೆ ವಿಷಯ ಗೊತ್ತಾಗಿದ್ದು’ ಎಂದು ಅಮ್ಲನ್ ಸಹೋದ್ಯೋಗಿಯೊಬ್ಬರು ಹೇಳಿದರು.

‘ಮೃತರ ಮನೆಯಲ್ಲಾಗಲೀ, ಕಚೇರಿಯಲ್ಲಾಗಲೀಯಾವುದೇ ಪತ್ರ ಸಿಕ್ಕಿಲ್ಲ. ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನೂ ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದೇವೆ. ‘ಖಿನ್ನತೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಮೃತರ ತಾಯಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ, ಸದ್ಯಕ್ಕೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ’ ಎಂದು ಮಹದೇವಪುರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.