ಬೆಂಗಳೂರು: ಅರೆಕಾಲಿಕ ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿ ಟೆಕಿಯಿಂದ ₹ 7.31 ಲಕ್ಷವನ್ನು ಸೈಬರ್ ವಂಚಕರು ದೋಚಿದ್ದಾರೆ. ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಅನಿತಾ ದಾಸರಿ ಅವರು ನೀಡಿದ ದೂರು ಆಧರಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 318(4) ಹಾಗೂ 319(2)ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೈಬರ್ ವಿಭಾಗದ ಪೊಲೀಸರು ಹೇಳಿದರು.
ಜಾಹ್ನವಿ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿ ಅನಿತಾ ದಾಸರಿ ಅವರು ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ವರ್ತೂರಿನಲ್ಲಿ ನೆಲಸಿರುವ ಅನಿತಾ ಅವರು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 5ರಂದು ಟೆಕಿಯ ಮೊಬೈಲ್‌ಗೆ ಟೆಲಿಗ್ರಾಮ್ ಆ್ಯಪ್ ಮೂಲಕ ಸಂದೇಶವೊಂದನ್ನು ಕಳುಹಿಸಿದ್ದ ವಂಚಕರು, ಅರೆಕಾಲಿಕ ಉದ್ಯೋಗದ ಅವಕಾಶ ಇರುವುದಾಗಿ ನಂಬಿಸಿದ್ದರು. ಲಿಂಕ್ ಮೂಲಕ ನೋಂದಣಿ ಮಾಡಿಕೊಂಡು ಹಣ ಹೂಡಿಕೆ ಮಾಡುವಂತೆಯೂ ತಿಳಿಸಿದ್ದರು. ಹೂಡಿಕೆಗೆ ಹೆಚ್ಚಿನ ಲಾಭ ನೀಡಲಾಗುವುದು ಎಂದೂ ನಂಬಿಸಿದ್ದರು. ವಂಚಕರ ಮಾತು ನಂಬಿದ್ದ ಟೆಕಿ ಆರಂಭದಲ್ಲಿ ₹1 ಸಾವಿರ ಹೂಡಿಕೆ ಮಾಡಿದ್ದರು. ಅದಕ್ಕೆ ₹1,400 ಲಾಭ ನೀಡಲಾಗಿತ್ತು. ಇನ್ನೂ ಹೆಚ್ಚಿನ ಟಾಸ್ಕ್ ನೀಡಲಾಗುವುದು. ಆ ಟಾಸ್ಕ್ ಪೂರ್ಣಗೊಳಿಸಿದರೆ ಅಧಿಕ ಹಣ ಸಿಗಲಿದೆ ಎಂಬುದಾಗಿ ಆಮಿಷವೊಡ್ಡಿದ್ದರು. ಅವರ ಮಾತು ನಂಬಿದ್ದ ಅನಿತಾ ಅವರು, ನಾಲ್ಕು ಪ್ರತ್ಯೇಕ ಖಾತೆಗಳಿಂದ ₹7.31 ಲಕ್ಷ ಹೂಡಿಕೆ ಮಾಡಿದ್ದರು. ಅದಾದ ಮೇಲೆ ಆರೋಪಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲಎಂಬುದಾಗಿ ಆರೋಪಿಸಿ ದೂರು ನೀಡಲಾಗಿದೆ’ ಎಂದು ಸೈಬರ್ ಅಪರಾಧ ಠಾಣೆಯ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.