ADVERTISEMENT

ತೆಪ್ಪ ಮಗುಚಿ ಕಣ್ಮರೆಯಾಗಿದ್ದ ಟೆಕಿ ಶವ ಪತ್ತೆ

ವಿವಿಧ ರಕ್ಷಣಾ ತಂಡಗಳಿಂದ ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 2:00 IST
Last Updated 10 ಫೆಬ್ರುವರಿ 2020, 2:00 IST
ಸಚಿನ್‌ಗಾಗಿ ಕಾರ್ಯಾಚರಣೆ
ಸಚಿನ್‌ಗಾಗಿ ಕಾರ್ಯಾಚರಣೆ   

ಕೆ.ಆರ್.ಪುರ: ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆಯಲ್ಲಿ ಶನಿವಾರ ನಸುಕಿನಲ್ಲಿ ತೆಪ್ಪ ಮಗುಚಿ ಕಣ್ಮರೆಯಾಗಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸಚಿನ್‌ (30) ಮೃತದೇಹ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ.

ಸಚಿನ್ ಅವರಿಗಾಗಿ ವಿವಿಧ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಸತತ 20 ಗಂಟೆಗಳ ಶೋಧಕಾರ್ಯದ ಬಳಿಕ ಮೃತದೇಹ ಸಿಕ್ಕಿದೆ.

ಸ್ನೇಹಿತ, ಬಂಜಾರ ಬಡಾವಣೆ ಉಲ್ಲಾಸ್‌ ಜೊತೆ ಪಾರ್ಟಿ ಮುಗಿಸಿ ಶನಿವಾರ ನಸುಕಿನ 2.30 ವೇಳೆಗೆ ವಾಯುವಿಹಾರಕ್ಕೆ ತೆರಳಿದ್ದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಕಂಪನಿಯೊಂದರ ಉದ್ಯೋಗಿ, ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಸಚಿನ್ ನಾಪತ್ತೆಯಾಗಿದ್ದರು. ತೆಪ್ಪದಲ್ಲಿ ಕುಳಿತು ಉಲ್ಲಾಸ್‌ ಮತ್ತು ಸಚಿನ್‌ ಕೆರೆಯ ಮಧ್ಯಭಾಗದ ನಡುಗಡ್ಡೆಗೆ ತೆರಳಿದ್ದರು. ದಡದಿಂದ ಸುಮಾರು 50 ಮೀಟರ್ ದೂರ ಹೋಗುತ್ತಿದ್ದಂತೆ ಹರಿಗೋಲು ಕೆಳಗಡೆ ಬಿದ್ದಿದೆ. ಅದನ್ನು ಹಿಡಿಯಲು ಯತ್ನಿಸಿದ ವೇಳೆ ತೆಪ್ಪ ಮಗುಚಿದೆ. ಉಲ್ಲಾಸ್‌ ಈಜಿ ದಡ ಸೇರಿದ್ದರು.

ADVERTISEMENT

ರಾಮಮೂರ್ತಿನಗರ ಠಾಣೆ ಸಿಬ್ಬಂದಿ, ಸಿವಿಲ್ ಡಿಫೆನ್ಸ್ ತಂಡ, ಎನ್‌ಡಿಆರ್‌ಎಫ್‌ ತಂಡ ಶನಿವಾರ ಬೆಳಗ್ಗಿನಿಂದ ಸಂಜೆವರೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದರೂ ಸಚಿನ್ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.

ಎನ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳದ ತುರ್ತು ಸ್ಪಂದನಾ ಸಿಬ್ಬಂದಿ ಮತ್ತು ಸಿವಿಲ್ ಡಿಫೆನ್ಸ್ ಸಿಬ್ಬಂದಿ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಮತ್ತೆ ಕೆರೆಯ ವಿವಿಧ ಭಾಗಗಳಲ್ಲಿ ಹುಡುಕಾಟ ಆರಂಭಿಸಿದ್ದರು.

ಎನ್‌ಡಿಆರ್‌ಎಫ್‌ ತಂಡದ ಸಿಬ್ಬಂದಿ ಸ್ಥಳೀಯ ಮೀನುಗಾರರನ್ನು ಕರೆಸಿ ಕೆರೆಯ ಆಳ, ಅಗಲದ ಬಗ್ಗೆ ಮಾಹಿತಿ ಪಡೆದಿದ್ದರು. ಐದು ರಬ್ಬರ್ ದೋಣಿಗಳನ್ನು ಬಳಸಿ, ಮೂವರು ಈಜುಗಾರರನ್ನು ಕೆರೆಗೆ ಇಳಿಸಿ ಹುಡುಕಾಟ ನಡೆಸುತ್ತಿರುವ ಮಧ್ಯೆ, ಮಧ್ಯಾಹ್ನ 2 ಗಂಟೆಗೆ ಸಚಿನ್ ಮೃತದೇಹ ಪತ್ತೆಯಾಯಿತು.

ಪ್ರಾಂತೀಯ ಅಗ್ನಿಶಾಮಕ ಅಧಿಕಾರಿ ದೇವರಾಜ್‌ ಮಾತನಾಡಿ, ‘180 ಎಕರೆ ವಿಶಾಲವಾಗಿರುವ ಕೆರೆಯಲ್ಲಿ ಶನಿವಾರ ಇಡೀ ದಿನ ಕಾರ್ಯಾಚರಣೆ ನಡೆಸಿದರೂ ಸಚಿನ್ ಪತ್ತೆಯಾಗಿರಲಿಲ್ಲ. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ತುರ್ತುಸೇವೆಗಳ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮೂಲಕ ಮೃತದೇಹ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ತೆಪ್ಪ ಮಗುಚಿ ಬಿದ್ದ ಜಾಗವನ್ನು ಉಲ್ಲಾಸ್‌ ತೋರಿಸಿದ್ದು ಕಾರ್ಯಾಚರಣೆಗೆ ಅನುಕೂಲವಾಯಿತು. ಸ್ಥಳೀಯ ಠಾಣೆಗೆ (ರಾಮಮೂರ್ತಿನಗರ) ಮೃತದೇಹವನ್ನು ಒಪ್ಪಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.