ADVERTISEMENT

ಟೆಕಿ ನಾಪತ್ತೆ: ಸಂಬಂಧಿಕರು- ಸಹೋದ್ಯೋಗಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2018, 19:25 IST
Last Updated 8 ಜುಲೈ 2018, 19:25 IST
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಜಿತಾಬ್‌ ಅವರ ಸಂಬಂಧಿಕರು ಹಾಗೂ ಸಹೋದ್ಯೋಗಿಗಳು – ಪ್ರಜಾವಾಣಿ ಚಿತ್ರ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಜಿತಾಬ್‌ ಅವರ ಸಂಬಂಧಿಕರು ಹಾಗೂ ಸಹೋದ್ಯೋಗಿಗಳು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಟೆಕಿ ಅಜಿತಾಬ್‌ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಅವರ ಸಂಬಂಧಿಕರು ಹಾಗೂ ಸಹೋದ್ಯೋಗಿಗಳು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಪುರಭವನ ಎದುರು ಸೇರಿದ್ದ ಪ್ರತಿಭಟನಾಕಾರರು, ‘ಉಳಿಸಿ ಉಳಿಸಿ ಅಜಿತಾಬ್‌ನನ್ನು ಉಳಿಸಿ’ ಎಂಬ ಬರಹವುಳ್ಳ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

‘ಕಳೆದ ಡಿಸೆಂಬರ್ 18ರಂದು ಅಜಿತಾಬ್‌ ನಾಪತ್ತೆಯಾಗಿದ್ದಾರೆ. ಬೆಳ್ಳಂದೂರು ಠಾಣೆಗೆ ಪೋಷಕರು ದೂರು ನೀಡಿದ್ದಾರೆ. ಅದಾಗಿ 200 ದಿನವಾದರೂ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ಅವರನ್ನು ಪತ್ತೆ ಹಚ್ಚಿಲ್ಲ. ಹೀಗಾಗಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದುಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

‘ಬೆಳ್ಳಂದೂರಿನ ಬ್ರಿಟಿಷ್‌ ಟೆಲಿಕಾಂ ಕಂಪನಿಯಲ್ಲಿ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಿಹಾರದ ಅಜಿತಾಬ್, ತಮ್ಮ ಸಿಯಾಜ್ ಕಾರು (ಕೆಎ 03 ಎನ್‍ಎ 1751) ಮಾರಾಟ ಮಾಡಲು ಒಎಲ್‌ಎಕ್ಸ್‌ ಜಾಲತಾಣದಲ್ಲಿ ಜಾಹೀರಾತು ನೀಡಿದ್ದರು. ಅದನ್ನು ಗಮನಿಸಿದ್ದ ವ್ಯಕ್ತಿಯೊಬ್ಬ, ಕಾರು ಖರೀದಿಸುವುದಾಗಿ ಹೇಳಿದ್ದ. ಆತನಿಗೆ ಕಾರು ತೋರಿಸಲು ಹೋದ ಅವರು, ವಾಪಸ್‌ ಬಂದಿಲ್ಲ. ಪೋಷಕರು ಹಾಗೂ ಸಂಬಂಧಿಕರು ಆತಂಕಗೊಂಡಿದ್ದಾರೆ’ ಎಂದು ಹೇಳಿದರು.

ಕಾಯ್ದೆ ತಿದ್ದುಪಡಿಗೆ ಆಗ್ರಹ

‘ಅಜಿತಾಬ್‌ ಬಳಿ ಬೆಲೆಬಾಳುವ ಮೊಬೈಲ್ ಇತ್ತು. ಅದರಲ್ಲಿ ಗೂಗಲ್‌, ಫೇಸ್‌ಬುಕ್‌ ಹಾಗೂ ಟ್ವಿಟರ್‌ ಆ್ಯಪ್‌ಗಳಿದ್ದವು. ಆ ಸಾಮಾಜಿಕ ಜಾಲತಾಣಗಳ ಕಂಪನಿಗಳು, ಪೊಲೀಸರಿಗೆ ಮಾಹಿತಿ ನೀಡುತ್ತಿಲ್ಲ. ತ್ವರಿತವಾಗಿ ಮಾಹಿತಿ ಸಿಗುವ ರೀತಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಪ್ರತಿಯೊಂದು ಸಾಮಾಜಿಕ ಜಾಲತಾಣಗಳು, ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಆ ಮಾಹಿತಿಯನ್ನು ಪೊಲೀಸರಿಗೆ ನೀಡಲು ತಿಂಗಳುಗಟ್ಟಲೇ ಕಾಲಾವಕಾಶ ಪಡೆಯುತ್ತಿವೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.