ADVERTISEMENT

ಹಣ ದ್ವಿಗುಣ ಆಮಿಷವೊಡ್ಡಿ ₹ 71.90 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 16:00 IST
Last Updated 4 ಜೂನ್ 2022, 16:00 IST
   

ಬೆಂಗಳೂರು: ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿದ್ದ ಸೈಬರ್ ವಂಚಕರು, ನಗರದ ನಿವಾಸಿಯೊಬ್ಬರಿಂದ ₹ 71.90 ಲಕ್ಷ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಹೊಸಕೆರೆಹಳ್ಳಿ ನಿವಾಸಿ ಪ್ರಕಾಶ್ ಎಂಬುವರು ಇತ್ತೀಚೆಗೆ ದೂರು ನೀಡಿದ್ದಾರೆ. ಅದರನ್ವಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಟೆಲಿಗ್ರಾಮ್ ಆ್ಯಪ್‌ನಲ್ಲಿ ‘ಫೈವ್–ಎಕ್ಸ್ ಅಡ್ವಾನ್ಸ್ ಟ್ರೇಡಿಂಗ್ ಟೀಮ್’ ಹೆಸರಿನ ಗ್ರೂಪ್ ಸೃಷ್ಟಿಸಿದ್ದ ಆರೋಪಿಗಳು, ದೂರುದಾರ ಪ್ರಕಾಶ್ ಅವರ ಮೊಬೈಲ್ ಸಂಖ್ಯೆ ಸೇರಿಸಿದ್ದರು. ‘ಕಡಿಮೆ ಅವಧಿಯಲ್ಲಿ ಹಣ ದುಪ್ಪಟ್ಟು ಮಾಡಲಾಗುವುದು’ ಎಂಬ ಸಂದೇಶಗಳನ್ನು ಗ್ರೂಪ್‌ನಲ್ಲಿ ಹರಿಬಿಡುತ್ತಿದ್ದರು. ಅಂಥ ಸಂದೇಶ ಗಮನಿಸಿದ್ದ ದೂರುದಾರ, ಹಣ ಹೂಡಿಕೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು.’

ADVERTISEMENT

‘ಹೂಡಿಕೆ ಮಾಡಲು ಮುಂದಾಗಿದ್ದ ದೂರುದಾರ, ಆರೋಪಿಗಳು ಹೇಳಿದ ರೀತಿಯಲ್ಲಿ ವೈಯಕ್ತಿಕ ಮಾಹಿತಿ ನೀಡಿ ಖಾತೆ ತೆರೆದಿದ್ದರು. ಆರಂಭದಲ್ಲಿ ₹ 5,000 ಮಾತ್ರ ಹೂಡಿಕೆ ಮಾಡಿದ್ದರು. ಅದಕ್ಕೆ ಯಾವುದೇ ಲಾಭ ಬಂದಿರಲಿಲ್ಲ. ಇದಾದ ನಂತರವೂ ಆರೋಪಿಗಳು, ‘ಪುನಃ ಹೂಡಿಕೆ ಮಾಡಿ. ಖಂಡಿತ ದುಪ್ಪಟ್ಟು ಹಣ ಬರುತ್ತದೆ’ ಎಂದು ನಾನಾ ರೀತಿಯಲ್ಲಿ ಆಮಿಷವೊಡ್ಡಿದ್ದರು. ಅದನ್ನು ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 71.90 ಲಕ್ಷ ಹೂಡಿಕೆ ಮಾಡಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಹೂಡಿಕೆ ಮಾಡಿದ್ದ ಹಣಕ್ಕೆ ಆರೋಪಿಗಳು ಯಾವುದೇ ಲಾಭ ನೀಡಿರಲಿಲ್ಲ. ಬೇಸತ್ತ ದೂರುದಾರ, ಅಸಲು ಹಣ ವಾಪಸು ಕೇಳಿದ್ದರು. ಅದಕ್ಕೂ ಆರೋಪಿಗಳು ಪ್ರತಿಕ್ರಿಯಿಸಿರಲಿಲ್ಲ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.