ADVERTISEMENT

ತಾಪಮಾನ ಹೆಚ್ಚಳ: ಜನ ತತ್ತರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 20:23 IST
Last Updated 4 ಮಾರ್ಚ್ 2020, 20:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಳೆದ ಎರಡು ದಿನಗಳಿಂದ ತಾಪಮಾನ ಏಕಾಏಕಿ ಸುಮಾರು 3 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚಾಗಿದೆ. ಬೇಸಿಗೆಯ ಆರಂಭದಲ್ಲೇ ಇಷ್ಟೊಂದು ತಾಪಮಾನ ಕಾಣಿಸಿರುವುದು ಆತಂಕ ಸೃಷ್ಟಿಸಿದೆ.

ತಾಪಮಾನ ಹೆಚ್ಚಳದಿಂದಾಗಿ ಮಂಗಳವಾರ ರಾತ್ರಿ ನಗರದ ಹಲವೆಡೆ ದಿಢೀರ್ ತುಂತುರು ಮಳೆ ಬಿದ್ದಿದೆ. ಬುಧವಾರ ಮುಂಜಾನೆ ಮೋಡದ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಎಲ್ಲೆಡೆ ಆವರಿಸಿದ ಸುಡುಬಿಸಿಲಿನ ಬೇಗೆಗೆ ಜನ ತತ್ತರಿಸಿದರು.

ಬೆಂಗಳೂರಿನಲ್ಲಿ ಕಳೆದ ವಾರ 30 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ, ಬುಧವಾರ 33 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದೆ. ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 32 ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 33 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

ADVERTISEMENT

ಮುಂದಿನ 48 ಗಂಟೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆ ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಗರಿಷ್ಠ 32 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

‘ಇದು ಚಳಿಗಾಲ ಮತ್ತು ಬೇಸಿಗೆ ನಡುವಿನ ಸಂಕ್ರಮಣ ಕಾಲ. ಈ ಸಮಯದಲ್ಲಿ ಹವಾಮಾನದಲ್ಲಿ ಏರಿಳಿತ ಸಾಮಾನ್ಯ. ತಾಪಮಾನ ದಿಢೀರ್‌ ಏರಿದಾಗ ಸಾಮಾನ್ಯವಾಗಿ ಮಳೆ ಸುರಿಯುತ್ತದೆ. ಇನ್ನೂ ಮೂರ್ನಾಲ್ಕು ದಿನ ನಗರದಲ್ಲಿ ಇದೇ ರೀತಿಯ ವಾತಾವರಣ ಇರಲಿದೆ’ ಎಂದು ಹಮಾವಾನ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.