ಬೆಂಗಳೂರು: ದೇಶದ ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿರುವ ಬೆಂಗಳೂರು ವಿಜ್ಞಾನ ಮತ್ತು ಸಂಶೋಧನೆಯ ಕೇಂದ್ರವಾಗಿದೆ. ಆದರೆ, ಸಂಪನ್ಮೂಲ ಪಡೆದುಕೊಳ್ಳುವಲ್ಲಿ ನಗರವು ಹಲವು ಸವಾಲು ಮತ್ತು ಒತ್ತಡ ಎದುರಿಸುತ್ತಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ನಗರದಲ್ಲಿ ಮಂಗಳವಾರ ಒ.ಪಿ.ಜಿಂದಾಲ್ ಜಾಗತಿಕ ವಿಶ್ವವಿದ್ಯಾಲಯ (ಜೆಜಿಯು) ಮತ್ತು ಆರ್.ವಿ. ವಿಶ್ವವಿದ್ಯಾಲಯದ ಸಹಯೋಗದಲ್ಲಿ ‘ಬೆಂಗಳೂರಿನಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮುನ್ನಡೆಸುವುದು: ಜ್ಞಾನ ಹಂಚಿಕೆ ಮತ್ತು ಸಹಕಾರದ ಮೂಲಕ ಬಹು-ಪಾಲುದಾರರ ಸಹಭಾಗಿತ್ವದ ಪರಿಣಾಮವನ್ನು ಹೆಚ್ಚಿಸುವುದು’ ಕುರಿತ ಬೆಂಗಳೂರು ಸುಸ್ಥಿರತೆ ಸಮಾವೇಶದಲ್ಲಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆಯಿಂದ ಎದುರಾಗುವ ಸವಾಲುಗಳನ್ನು ನಿವಾರಣೆ ಮಾಡುವಲ್ಲಿ ಜ್ಞಾನದ ಹಂಚಿಕೆ, ಸಹಕಾರ ಮತ್ತು ಮಾಹಿತಿ ವಿನಿಮಯ ಮಹತ್ವದ ಪಾತ್ರ ವಹಿಸುತ್ತದೆ. ಪರಿಸರಕ್ಕೆ ಇಂಗಾಲ ಸೇರ್ಪಡೆ, ಮಾಲಿನ್ಯ, ಅರಣ್ಯಗಳ ನಾಶ ಹಾಗೂ ಇತರೆ ಅಂಶಗಳು ಹವಾಮಾನಕ್ಕೆ ಸಂಬಂಧಿಸಿದ ಸಂಕಷ್ಟಕ್ಕೆ ಕಾರಣವಾಗಿವೆ. ಈ ಎಲ್ಲಾ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ಕಂಡುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.
ಈ ವಿಷಯ ಕುರಿತು ಜನರಿಗೆ ಮಾಹಿತಿ ನೀಡುವುದರ ಜತೆಗೆ ಅವರನ್ನು ಸಂವೇದನಾಶೀಲರನ್ನಾಗಿ ಮಾಡುವ ಅಗತ್ಯವಿದೆ. ಇಂಧನ, ನೀರು ಹಾಗೂ ಇತರೆ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಆಂದೋಲನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಎಸ್‌ಡಿಜಿ (ಸುಸ್ಥಿರ ಅಭಿವೃದ್ಧಿ ಗುರಿ) ಸಾಧಿಸುವಲ್ಲಿ ಸುಸ್ಥಿರ ಅಭಿವೃದ್ಧಿ ವರದಿ (ಎಸ್‌ಡಿಆರ್) ಸಕಾಲಿಕ ಮಾತ್ರವಲ್ಲದೇ ಮಹತ್ವದ್ದಾಗಿದೆ. ಜಿಂದಾಲ್ ವಿಶ್ವವಿದ್ಯಾಲಯವು ಸುಸ್ಥಿರ ಪರಿಸರ ಹಾಗೂ ಅದರ ಸಂರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತದೆ ಎಂದರು.
ಕೇಂದ್ರ ಜಾರಿಗೊಳಿಸುತ್ತಿರುವ ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ-ಗ್ರಾಮೀಣ ಮತ್ತು ನಗರ, ಡಿಜಿಟಲ್ ಇಂಡಿಯಾ, ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ಕೌಶಲ ಭಾರತ ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅನುಗುಣವಾಗಿವೆ ಎಂದರು.
ಇದೇ ವೇಳೆ ಸುಸ್ಥಿರ ಅಭಿವೃದ್ಧಿ ವರದಿ (ಎಸ್‌ಡಿಆರ್) ಬಿಡುಗಡೆ ಮಾಡಿದರು. ಜಿಂದಾಲ್ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸಿ.ರಾಜಕುಮಾರ್, ಆರ್.ವಿ.ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎ.ವಿ.ಎಸ್.ಮೂರ್ತಿ, ಅಮೆರಿಕ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ವಿಲ್ಸನ್, ಜೆಜಿಯು ಡೀನ್ ಪ್ರೊ. ಪದ್ಮನಾಭ, ಜೆಎಸ್‌ಜಿಪಿ ಡೀನ್ ಪ್ರೊ. ಆರ್.ಸುದರ್ಶನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.