ADVERTISEMENT

ಶಾಲೆಗಳಿಂದಲೇ ರಾಜ್ಯ ಭಾಷೆಯ ಏಳ್ಗೆ ಸಾಧ್ಯ: ರಹಮತ್ ತರೀಕೆರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:41 IST
Last Updated 21 ಜೂನ್ 2025, 15:41 IST
ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಅವರನ್ನು ಗೌರವಿಸಲಾಯಿತು. ಕೆ.ಎಂ.ಗಾಯಿತ್ರಿ ಮತ್ತು ಇಲಾಖೆ ಜಂಟಿ ನಿರ್ದೇಶಕಿ ಬನಶಂಕರಿ ವಿ. ಅಂಗಡಿ ಉ‍ಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಅವರನ್ನು ಗೌರವಿಸಲಾಯಿತು. ಕೆ.ಎಂ.ಗಾಯಿತ್ರಿ ಮತ್ತು ಇಲಾಖೆ ಜಂಟಿ ನಿರ್ದೇಶಕಿ ಬನಶಂಕರಿ ವಿ. ಅಂಗಡಿ ಉ‍ಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಾಲೆಗಳಿಂದಲೇ ರಾಜ್ಯ ಭಾಷೆಯ ಏಳ್ಗೆ ಸಾಧ್ಯ. ಸರ್ಕಾರವು ಶಿಕ್ಷಣವನ್ನು ವ್ಯಾಪಾರೀಕರಿಸಿ, ಸರ್ಕಾರಿ ಶಾಲೆಗಳನ್ನು ಅನಾಥಗೊಳಿಸಬಾರದು’ ಎಂದು ಸಾಹಿತಿ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. 

‘ಅತ್ಯುತ್ತಮ ಮೂಲಸೌಕರ್ಯ ಹೊಂದಿರುವ ಖಾಸಗಿ ಶಾಲೆಗಳು, ಮೂಲಸೌಕರ್ಯದ ಕೊರತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ನಡುವೆ ಹೋಲಿಕೆ ಮಾಡಿದರೆ, ಅತ್ಯುತ್ತಮ ಮೌಲ್ಯಗಳನ್ನು ಸರ್ಕಾರಿ ಶಾಲೆಗಳೇ ಒದಗಿಸುತ್ತಿವೆ. ಆಧುನಿಕ ಶಿಕ್ಷಣವು ಮನುಷ್ಯತ್ವ ಮತ್ತು ತಾಯ್ತ‌ನದ ಕೊರತೆ ಎದುರಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಷಕಕ್ಕುವ ಆಧುನಿಕ ವಿದ್ಯಾವಂತರನ್ನು ನೋಡಿದರೆ ಹೀಗೆ ಅನಿಸುತ್ತದೆ’ ಎಂದು ಹೇಳಿದರು. 

ADVERTISEMENT

‘ಬಹು ಭಾಷೆ, ಬಹು ಸಂಸ್ಕೃತಿ, ಬಹು ಧರ್ಮಗಳು ಒಟ್ಟಿಗೆ ಸಾಗುವುದು ಭಾರತ ಹಾಗೂ ಕರ್ನಾಟಕ ಸಂಸ್ಕೃತಿಯ ರಹಸ್ಯ. ಭಾರತದ ಅತ್ಯಂತ ಶ್ರೇಷ್ಠ ಸಂಗೀತ, ಸಾಹಿತ್ಯ, ಸಂಸ್ಕೃತಿ ಹುಟ್ಟಿರುವುದೇ ಅತ್ಯುತ್ತಮವಾದುದ್ದರ ಒಳಗೊಳ್ಳುವಿಕೆಯಿಂದ. ಬಹುತ್ವ ಈ ದೇಶವನ್ನು ಉಳಿಸಿಕೊಳ್ಳುವ ಆತ್ಮ. ಕರ್ನಾಟಕವು ಸಾವಿರಾರು ವರ್ಷಗಳಿಂದ ಬಹುತ್ವದ ಪ್ರಯೋಗ ಮಾಡಿದೆ’ ಎಂದು ಅಭಿಪ್ರಾಯಪಟ್ಟರು. 

‘ನನ್ನ ಪಾಲಿಗೆ ತಂದೆಯೇ ನನ್ನ ಹಿರೋ. ನನ್ನ ಮತ್ತು ಸಹೋದರನನ್ನು ಅವರು ಕನ್ನಡ ಮಾಧ್ಯಮ ಶಾಲೆಗೆ ಸೇರಿಸದಿದ್ದರೆ ಈಗ ಎಲ್ಲಿ ಇರುತ್ತಿದ್ದೆವೋ ತಿಳಿದಿಲ್ಲ. ನನ್ನ ಮಕ್ಕಳೂ ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದುಕೊಂಡಿದ್ದರು. ಕನ್ನಡ ನಮ್ಮನ್ನು ಪೊರೆದ ತಾಯಿ. ಮುಸ್ಲಿಮರು ಕನ್ನಡ ಕಲಿಯದವರು ಎಂಬ ಪೂರ್ವಾಗ್ರಹ ಈಗಲೂ ಇದೆ. ಉತ್ತರ ಕರ್ನಾಟಕದಲ್ಲಿ ಮನೆಯಲ್ಲಿ ಕನ್ನಡ ಮಾತನಾಡುವ ಅನೇಕ ಮುಸ್ಲಿಮರಿದ್ದಾರೆ’ ಎಂದರು. 

‘ಪ್ರಾದೇಶಿಕ ಭಾಷೆಯನ್ನು ಇಟ್ಟುಕೊಂಡೆ ಇಂಗ್ಲಿಷ್ ಭಾಷೆಗೆ ಹೋಗಬೇಕು. ಮಾತೃ ಭಾಷೆಯನ್ನು ಬಿಟ್ಟುಕೊಡಬಾರದು. ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಅರಿವು ಮಾತೃ ಭಾಷೆಯಿಂದ ಬರಲಿದೆ’ ಎಂದು ಹೇಳಿದರು.

‘ಇತಿಹಾಸ ಶಿಕ್ಷಕ ಗೋವಿಂದರಾಜು ಅವರು ಸಾಹಿತ್ಯದ ಪ್ರೀತಿ ಬೆಳೆಸಿದರು’ ಎಂದು ಹೇಳುತ್ತಲೇ ಭಾವುಕರಾದ ಅವರು, ‘ನಮ್ಮ ಕಾಲದಲ್ಲಿ ಸರ್ಕಾರಿ ಶಾಲೆಗಳು ಅತ್ಯುತ್ತಮವಾಗಿದ್ದವು. ತರಗತಿಯಲ್ಲಿ ನಾನೊಬ್ಬನೇ ಮುಸ್ಲಿಂ ವಿದ್ಯಾರ್ಥಿಯಾಗಿದ್ದರೂ ಶಿಕ್ಷಕರು ಎಂದೂ ಭೇದ ಭಾವ ತೋರಿರಲಿಲ್ಲ. ಅತ್ಯುತ್ತಮ ಲೇಖಕರು ಹುಟ್ಟಿಕೊಂಡಿದ್ದು ಅತ್ಯುತ್ತಮ ಸರ್ಕಾರಿ ಶಾಲೆಗಳಿಂದ. ನಮ್ಮ ಕಾಲದಲ್ಲಿ ಸರ್ಕಾರಿ ಶಾಲೆಗಳು ಉತ್ತಮ ವಿದ್ಯೆ, ಜೀವನ ತತ್ವ ನೀಡಿದ್ದವು’ ಎಂದರು. 

ಇದೇ ವೇಳೆ ತಮ್ಮ ಬರವಣಿಗೆ ಬಗ್ಗೆಯೂ ಸ್ಮರಿಸಿಕೊಂಡ ಅವರು, ನನಗೆ ‘ಪ್ರಜಾವಾಣಿ’ಯ ‘ನಡೆದಷ್ಟೂ ನಾಡು’ ಅಂಕಣ ವಿಶಿಷ್ಟ ಅಸ್ಮಿತೆ ನೀಡಿತು ಎಂದು ಹೇಳಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.