ADVERTISEMENT

ಬಸ್ ಪ್ರಯಾಣಿಕರ ಆಭರಣ, ನಗದು ಕಳವು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 20:27 IST
Last Updated 15 ಡಿಸೆಂಬರ್ 2022, 20:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರಿಬ್ಬರ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಹಾಗೂ ಹಲಸೂರು ಗೇಟ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

‘ತಮಿಳುನಾಡು ಸೇಲಂನ ಸೆಂಥಿಲ್‌ ಕುಮಾರ್ ಹಾಗೂ ನಾಗಸಂದ್ರದ ವಕೀಲರೊಬ್ಬರು ಪ್ರತ್ಯೇಕ ದೂರು ನೀಡಿದ್ದಾರೆ. ನಾಲ್ವರು ಮಹಿಳೆಯರು ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ರಾಜಹಂಸ ಬಸ್‌ನಲ್ಲಿ ಕಳ್ಳತನ: ‘ಸೆಂಥಿಲ್‌ಕುಮಾರ್ ಹಾಗೂ ಅವರ ಪತ್ನಿ ಇತ್ತೀಚೆಗೆ ನಗರಕ್ಕೆ ಬಂದಿದ್ದರು. ವಾಪಸ್ ಸೇಲಂಗೆ ಹೋಗಲು ಎಲೆಕ್ಟ್ರಾನಿಕ್ ಸಿಟಿ 2ನೇ ಹಂತ ಬಳಿಯ ಟೋಲ್‌ಗೇಟ್‌ನಲ್ಲಿ ನ. 5ರಂದು ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಹತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ನಾಲ್ವರು ಮಹಿಳೆಯರು ಸಹ ಅದೇ ಬಸ್ ಹತ್ತಿದ್ದರು. ಸೆಂಥಿಲ್‌ಕುಮಾರ್ ದಂಪತಿ ಕುಳಿತಿದ್ದ ಸೀಟಿನ ಪಕ್ಕದಲ್ಲೇ ಮಹಿಳೆಯರು ಕುಳಿತಿದ್ದರು. ಸೀಟಿನ ಕೆಳಗೆ ₹ 1 ನಾಣ್ಯ ಎಸೆದಿದ್ದ ಆರೋಪಿತ ಮಹಿಳೆಯರು, ಅದನ್ನು ತೆಗೆದುಕೊಂಡುವಂತೆ ಸೆಂಥಿಲ್‌ಕುಮಾರ್ ಪತ್ನಿಗೆ ಹೇಳಿದ್ದರು. ನಾಣ್ಯ ತೆಗೆದುಕೊಳ್ಳುವ ವೇಳೆಯಲ್ಲೇ ಆರೋಪಿಗಳು ಅವರ ಬ್ಯಾಗ್ ಕದ್ದಿದ್ದರು. ಅದಾದ ನಂತರ, ಮುಂದಿನ ನಿಲ್ದಾಣದಲ್ಲಿ ಆರೋಪಿಗಳು ಬಸ್‌ನಿಂದ ಇಳಿದುಹೋಗಿದ್ದಾರೆ’ ಎಂದು ಹೇಳಿವೆ.

ಜೇಬಿನಲ್ಲಿದ್ದ ₹ 50 ಸಾವಿರ ಕಳ್ಳತನ: ‘64 ವರ್ಷದ ವಕೀಲ, ಕಾವೇರಿ ಭವನದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಡಿ. 8ರಂದು ₹1.20 ಲಕ್ಷ ಡ್ರಾ ಮಾಡಿಕೊಂಡಿದ್ದರು. ಪ್ಯಾಂಟಿನ ಒಂದು ಜೇಬಿನಲ್ಲಿ ₹ 50 ಸಾವಿರ ಹಾಗೂ ಮತ್ತೊಂದು ಜೇಬಿನಲ್ಲಿ ₹ 70 ಸಾವಿರ ಇಟ್ಟುಕೊಂಡು ಕೆ.ಜಿ.ರಸ್ತೆಗೆ ಹೋಗಿದ್ದರು. 8ನೇ ಮೈಲಿಗೆ ಹೋಗಲು ಬಿಎಂಟಿಸಿ ಬಸ್‌ ಹತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಸ್ಸಿನಲ್ಲಿ ಹೆಚ್ಚು ಪ್ರಯಾಣಿಕರಿದ್ದರು. ಅದರಲ್ಲೇ ತಳ್ಳಾಡಿಕೊಂಡು ವಕೀಲರು ಬಸ್‌ನೊಳಗೆ ಹತ್ತಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ದಟ್ಟಣೆಯಲ್ಲಿ ಬಸ್ ನಿಂತುಕೊಂಡಿತ್ತು. ಇದೇ ವೇಳೆ ಒಂದು ಜೇಬಿನಲ್ಲಿ ನೋಡಿದಾಗ ₹ 50 ಸಾವಿರ ಹಣವಿರಲಿಲ್ಲ. ಬಸ್ಸಿನೊಳಗೆ ಹತ್ತುವಾಗಲೇ ಯಾರೂ ಹಣ ಕದ್ದಿದ್ದಾರೆಂದು ವಕೀಲ ದೂರಿನಲ್ಲಿ ತಿಳಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.