ADVERTISEMENT

ಚಿನ್ನಾಭರಣ ಕಳ್ಳತನ: ಮೂವರ ಸೆರೆ

ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 14:17 IST
Last Updated 17 ಜೂನ್ 2025, 14:17 IST
   

ಬೆಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಶಿವಪ್ರಸಾದ್, ಲಿಖಿತ್‌ ಹಾಗೂ ಜೈದೀಪ್‌ ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ರಘುವನಹಳ್ಳಿ ರಘು ಅಲಿಯಾಸ್‌ ಪೆಪ್ಸಿ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಬಂಧಿತರಿಂದ 175 ಗ್ರಾಂ ಚಿನ್ನಾಭರಣ, 1 ಕೆ.ಜಿ 500 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ₹9 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಬನಶಂಕರಿ ಮೂರನೇ ಹಂತದ ನಿವಾಸಿ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

‘ದೂರುದಾರರು ಹಾಗೂ ಅವರ ಪತ್ನಿ ಮನೆಗೆ ಬೀಗ ಹಾಕಿಕೊಂಡು ಚಿಕ್ಕಮಗಳೂರಿಗೆ ತೆರಳಿದ್ದರು. ಮೇ 22ರಂದು ವಾಪಸ್‌ ಬಂದು ನೋಡಿದಾಗ ಮನೆಯ ಬೀಗ ಒಡೆದು ಕೊಠಡಿಯಲ್ಲಿನ ಬೀರುವಿನಲ್ಲಿದ್ದ ₹ 24 ಲಕ್ಷ ನಗದು, 175 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ. 500 ಗ್ರಾಂ ಬೆಳ್ಳಿ ನಾಣ್ಯಗಳನ್ನು ಕಳವು ಮಾಡಿರುವುದು ಗೊತ್ತಾಗಿತ್ತು. ಹೊರ ವರ್ತುಲ ರಸ್ತೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಬಂಧನದಿಂದ ಸಿ.ಕೆ. ಅಚ್ಚುಕಟ್ಟು ಹಾಗೂ ಹನುಮಂತನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳು ಪತ್ತೆ ಆಗಿವೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.