ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಶುಕ್ರವಾರ ಗುಡುಗು– ಮಿಂಚು, ಬಿರುಗಾಳಿಯೊಂದಿಗೆ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಮಧ್ಯಾಹ್ನದಿಂದ ಮೋಡಕವಿದ ವಾತಾವರಣವಾಗಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಮಳೆ ಸುರಿಯಿತು. ಕೆಂಗೇರಿ, ರಾಜರಾಜೇಶ್ವರಿನಗರ, ಹೆಮ್ಮಿಗೆಪುರ, ನಾಯಂಡಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿತ್ತು.
ಜೆ.ಸಿ ರಸ್ತೆಯಲ್ಲಿ ಮಳೆಗೆ ಜನರು ಕೊಡೆ ಹಿಡಿದು ರಸ್ತೆ ಗಾಟಿದರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್‌ಜಿ
ಸಂಜೆ 5 ಗಂಟೆಯ ವೇಳೆಗೆ ಮಳೆ ಆರಂಭವಾಯಿತು. ವಾಹನ ಸವಾರರು ರಸ್ತೆಯಲ್ಲಿ ಮಳೆ ನೀರಿನಲ್ಲೇ ಸಂಚರಿಸುವ ಜೊತೆಗೆ, ಗುಡುಗಿನ ಆರ್ಭಟಕ್ಕೆ ಬೆಚ್ಚಿ ಬಿದ್ದರು. ಸುಮಾರು ಒಂದು ಗಂಟೆ ಸುರಿದ ಮಳೆ ಬಿಡುವು ನೀಡಿತು. ರಾತ್ರಿ 9ರ ನಂತರ ಮಿಂಚಿನೊಂದಿಗೆ ಗುಡುಗಿನ ಆರ್ಭಟ ಹೆಚ್ಚಾಗಿ, ಕೆಲವೆಡೆ ಬಿರುಸಾಗಿ ಮಳೆ ಸುರಿಯಿತು. ಮಧ್ಯ ರಾತ್ರಿಯವರೆಗೂ ಹಲವು ಪ್ರದೇಶಗಳಲ್ಲಿ ತುಂತುರು ಮಳೆಯಾಯಿತು.
ವಿಜಯನಗರದಿಂದ ಪ್ರಸನ್ನ ಜಂಕ್ಷನ್, ಕುವೆಂಪು ವೃತ್ತದಿಂದ ಬಿಇಎಲ್ ವೃತ್ತ, ಪೀಣ್ಯ ಮೇಲ್ಸೇತುವೆಯಿಂದ ಪಾರ್ಲೆ ಟೋಲ್, ವಡ್ಡರಪಾಳ್ಯದಿಂದ ಗೆದ್ದಲಹಳ್ಳಿ, ಆರ್.ಟಿ. ನಗರದ ಸಿಬಿಐ ಮೇಲ್ಸೇತುವೆಯಿಂದ ವಿಮಾನ ನಿಲ್ದಾಣ ರಸ್ತೆ, ಹೆಬ್ಬಾಳದಿಂದ ಗೊರಗುಂಟೆಪಾಳ್ಯ, ಬಿನ್ನಿಮಿಲ್ ಜಂಕ್ಷನ್‌ನಿಂದ ರೈಲು ನಿಲ್ದಾಣ, ಮದರ್ ಡೇರಿಯಿಂದ ಎಂ.ಎಸ್. ಪಾಳ್ಯ, ಲುಲು ಮಾಲ್‌ನಿಂದ ಮೆಜೆಸ್ಟಿಕ್, ಯಲಹಂಕ ಕಾಫಿ ಡೇಯಿಂದ ವಿಮಾನ ನಿಲ್ದಾಣ, ಸಂತೆ ವೃತ್ತದಿಂದ ಕೋಗಿಲು ಕ್ರಾಸ್‌ವರೆಗಿನ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಯಶವಂತಪುರದ ಕೂಲಿನಗರ, ಶೇಷಾದ್ರಿಪುರದಲ್ಲಿ ಮರ ರಸ್ತೆಗೆ ಉರುಳಿ, ವಾಹನ ದಟ್ಟಣೆ ಉಂಟಾಗಿತ್ತು.
ಕೆಂಗೇರಿಯಲ್ಲಿ 7.8 ಸೆಂ.ಮೀ, ಆರ್.ಆರ್.ನಗರದಲ್ಲಿ 4.35 ಸೆಂ.ಮೀ, ಹೆಮ್ಮಿಗೆಪುರದಲ್ಲಿ 3.6 ಸೆಂ.ಮೀ, ಎಚ್.ಗೊಲ್ಲಹಳ್ಳಿ ಸೆಂ.ಮೀ, ನಾಯಂಡಹಳ್ಳಿ 35 ಸೆಂ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 3.2 ಸೆಂ.ಮೀ, ಬಾಗಲಕುಂಟೆ 3.1 ಸೆಂ.ಮೀ, ಹೇರೋಹಳ್ಳಿ 3 ಸೆಂ.ಮೀ, ಹಂಪಿ ನಗರ 2.95 ಸೆಂ.ಮೀ, ಚೊಕ್ಕಸಂದ್ರ 2.9 ಸೆಂ.ಮೀ, ಶೆಟ್ಟಿಹಳ್ಳಿ 2.75 ಸೆಂ.ಮೀ, ದೊಡ್ಡಬಿದಿರುಕಲ್ಲು 2.35, ಬಸವೇಶ್ವರನಗರ 2.3 ಸೆಂ.ಮೀ, ಜಕ್ಕೂರು 2.25 ಸೆಂ.ಮೀ, ವಿದ್ಯಾಪೀಠ 1.9 ಸೆಂ.ಮೀ ಮಳೆಯಾಯಿತು.
ಟೌನ್‌ಹಾಲ್ ಬಳಿ ಶುಕ್ರವಾರ ರಾತ್ರಿ ಆಗಸದಲ್ಲಿ ಮಿಂಚು ಕಂಡುಬಂತು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್‌ಜಿ
ನಿಯಂತ್ರಣ ಕೊಠಡಿಗೆ ಮಹೇಶ್ವರ ರಾವ್
ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿ ಹಾಗೂ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ಭೇಟಿನೀಡಿ ಮಳೆ ಸುರಿಯುತ್ತಿರುವ ಕಾರಣದಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ವಲಯ ಆಯುಕ್ತರಿಗೆ ಸೂಚಿಸಿದರು.
ಮಳೆ ಹಾಗೂ ಗಾಳಿಗೆ ಧರೆಗುರುಳುವ ಮರಗಳು ಮರದ ರೆಂಬೆ ಕೊಂಬೆಗಳನ್ನು ತುರ್ತಾಗಿ ತೆರವುಗೊಳಿಸುವಂತೆ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ನಿಯಂತ್ರಣ ಕೊಠಡಿಗೆ ಬಂದ ದೂರುಗಳನ್ನು ಕೂಡಲೆ ಇತ್ಯರ್ಥಪಡಿಸಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ರಸ್ತೆಯಲ್ಲಿ ನಿಂತಿರುವ ನೀರನ್ನು ಸೈಡ್ ಡ್ರೈನ್‌ಗಳಿಗೆ ಸರಾಗವಾಗಿ ಹೋಗುವಂತೆ ಮಾಡಲು ಸೂಚಿಸಿದರು.
ವಾಣಿ ವಿಲಾಸ ರಸ್ತೆಯಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು ಸಂಚಾರ ದಟ್ಟಣೆ ಉಂಟಾಗಿತ್ತು. ಮುಖ್ಯ ಆಯುಕ್ತರು ದಕ್ಷಿಣ ವಲಯದ ಆಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತುರ್ತು ಕ್ರಮಕ್ಕೆ ಸೂಚಿಸಿದರು. ದಕ್ಷಿಣ ವಲಯದಲ್ಲಿ ಎರಡು ಕಾರು ಹಾಗೂ ದಾಸರಹಳ್ಳಿ ವಲಯದಲ್ಲಿ ಒಂದು ಕಾರಿನ ಮೇಲೆ ಮರ ಬಿದ್ದು ಜಖಂಗೊಂಡಿದ್ದು ಯಾರಿಗೂ ಹಾನಿಯಾಗಿರುವುದಿಲ್ಲ. ನಾಗರಿಕರು ಮಳೆಯಿಂದಾಗಿ ಯಾವುದೇ ಸಮಸ್ಯೆಯಾದರೂ ಪಾಲಿಕೆಯ ಸಹಾಯವಾಣಿ 1533 ಗೆ ಕರೆ ಮಾಡಿ ದೂರು ನೀಡಿ ಎಂದು ಹೇಳಿದರು. ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ನವೀನ್ ಕುಮಾರ್ ರಾಜ್ ಉಪಸ್ಥಿತರಿದ್ದರು.
ಮಳೆಯಿಂದ ರಸ್ತೆಗಳಲ್ಲಿ ನಿಂತು ವಾಹನ ಸಂಚಾರ ಮಂದಗತಿಯಲ್ಲಿ ಸಾಗಿತು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್‌ಜಿ
ಮರಗಳ ಕೆಳಗೆ ನಿಲ್ಲದಂತೆ ಮನವಿ
ನಗರದಲ್ಲಿ ಗಾಳಿ ಮಳೆ ಸಂದರ್ಭದಲ್ಲಿ ರಸ್ತೆಗಳಲ್ಲಿ ಓಡಾಡುವುದು ಬೃಹತ್ ಮರಗಳ ಕೆಳಗಡೆ ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು ಎಂದು ನಾಗರಿಕರಲ್ಲಿ ಬಿಬಿಎಂಪಿ ಮನವಿ ಮಾಡಿಕೊಂಡಿದೆ.
ಗುರುವಾರ ಸಂಜೆ ಸುರಿದ ಮಳೆಗೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿನ ಕತ್ರಿಗುಪ್ಪೆ ಗೋ-ಗ್ಯಾಸ್ ಬಂಕ್‌ನ ಸಮೀಪ ನಿಂತಿದ್ದ ಆಟೊ ಹಾಗೂ ಎರಡು ಕಾರುಗಳ ಮೇಲೆ ಬೃಹತ್ ಮರವೊಂದು ಮುರಿದು ಬಿದ್ದು ಮಹೇಶ್ (40) ಎಂಬುವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿರುತ್ತಾರೆ. ಗಾಳಿ ಮಳೆಗೆ ಎಲ್ಲಾ ವಲಯಗಳ ವ್ಯಾಪ್ತಿಯಲ್ಲಿ ಸುಮಾರು 23 ಮರಗಳು ಹಾಗೂ 52 ಬೃಹತ್ ರೆಂಬೆಗಳು ಬಿದ್ದಿವೆ. ಅರಣ್ಯ ಘಟಕವು ಆಯಾ ವಲಯಗಳ ಅಧಿಕಾರಿಗಳೊಂದಿಗೆ ಜೊತೆಗೂಡಿ ತೆರವು ಕಾರ್ಯ ನಡೆಸುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿದ್ದರು. ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.